
ಪ್ರಾತಿನಿಧಿಕ ಚಿತ್ರ
ಕೃಪೆ: Gemini AI
ಲಖನೌ: ಟಿಕೆಟ್ ವಿಚಾರವಾಗಿ ನಡೆದ ವಾಗ್ವಾದದ ವೇಳೆ 'ಪ್ರಯಾಣ ಟಿಕೆಟ್ ಪರೀಕ್ಷಕ' (ಟಿಟಿಇ) ಸಿಟ್ಟಿನ ಭರದಲ್ಲಿ ನೂಕಿದ ಪರಿಣಾಮ ನೌಕಾಪಡೆ ಅಧಿಕಾರಿಯ ಪತ್ನಿಯು ರೈಲಿನಿಂದ ಬಿದ್ದು ಮೃತಪಟ್ಟಿರುವ ಪ್ರಕರಣ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ವರದಿಯಾಗಿದೆ.
ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ಈ ಸಂಬಂಧ ಟಿಟಿಇ ಸಂತೋಷ್ ಕುಮಾರ್ ಎಂಬವರ ವಿರುದ್ಧ ಇಟಾವಾ ರೈಲ್ವೆ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಮೃತರನ್ನು ಆರತಿ ಯಾದವ್ ಎಂದು ಗುರುತಿಸಲಾಗಿದೆ. ಅವರು, ಚಿಕಿತ್ಸೆ ಸಲುವಾಗಿ ಪಟ್ನಾ–ಆನಂದ ವಿಹಾರ ವಿಶೇಷ ರೈಲಿನಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.
ಆರತಿಯವರು ಬೇರೊಂದು ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಆದರೆ, ಗಡಿಬಿಡಿಯಲ್ಲಿ ಪಟ್ನಾ–ಆನಂದ ವಿಹಾರ ವಿಶೇಷ ರೈಲನ್ನು ಏರಿದ್ದರು ಎಂದು ಮೂಲಗಳು ತಿಳಿಸಿವೆ.
ಮಹಿಳೆಯ ಶವ ಭರ್ಥಾನ ಪಟ್ಟಣದಲ್ಲಿ ರೈಲು ಹಳಿಯ ಹತ್ತಿರ ಬುಧವಾರ ಪತ್ತೆಯಾಗಿದೆ. ಆರಂಭದಲ್ಲಿ, ಇದು ಅಪಘಾತವೆಂದು ಪರಿಗಣಿಸಲಾಗಿತ್ತು. ಆದರೆ, ತನಿಖೆಯ ವೇಳೆ ಕೃತ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕಿತ್ಸೆಗಾಗಿ ದೆಹಲಿಗೆ ತೆರಳುತ್ತಿದ್ದ ಆರತಿಯವರ ಪತಿ ಮುಂಬೈನಲ್ಲಿ ಉದ್ಯೋಗದಲ್ಲಿದ್ದಾರೆ. ಟಿಟಿಇ ಮೊದಲು ಆರತಿಯವರ ಪರ್ಸ್ ಅನ್ನು ರೈಲಿನಿಂದ ಹೊರಗೆ ಎಸೆದಿದ್ದರು. ನಂತರ ಅವರನ್ನೂ ಕೆಳಗೆ ನೂಕಿದರು. ಆರತಿಯವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಶವ ಪತ್ತೆಯಾಗಿರುವ ಸ್ಥಳದಿಂದ ಕೆಲವು ಕಿ.ಮೀ. ದೂರದಲ್ಲಿ ಪರ್ಸ್ ಪತ್ತೆಯಾಗಿದೆ. ಆರತಿಯವರ ಮೊಬೈಲ್ ಇನ್ನೂ ಸಿಕ್ಕಿಲ್ಲ ಎಂದೂ ಮೂಲಗಳು ಮಾಹಿತಿ ನೀಡಿವೆ.
ಟಿಟಿಇ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ರೈಲ್ವೆ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.