ADVERTISEMENT

‘ಸಂಚಾರ ಸಾಥಿ’ ಆ್ಯಪ್‌ ಕಡ್ಡಾಯ: ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕಾ ಆಕ್ರೋಶ

ಏಜೆನ್ಸೀಸ್
Published 2 ಡಿಸೆಂಬರ್ 2025, 6:37 IST
Last Updated 2 ಡಿಸೆಂಬರ್ 2025, 6:37 IST
<div class="paragraphs"><p>ಪ್ರಿಯಾಂಕಾ ಗಾಂಧಿ</p></div>

ಪ್ರಿಯಾಂಕಾ ಗಾಂಧಿ

   

ನವದೆಹಲಿ: ದೇಶದಲ್ಲಿ ತಯಾರಾದ ಅಥವಾ ಆಮದು ಮಾಡಿಕೊಳ್ಳುವ ಎಲ್ಲಾ ಮೊಬೈಲ್‌ಗಳಲ್ಲಿ ‘ಸಂಚಾರ ಸಾಥಿ’ ಆ್ಯಪ್‌ ಅಳವಡಿಕೆ (ಇನ್‌ಸ್ಟಾಲ್) ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ಇದೇ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ರಾಜಕೀಯ ವಾಕ್ಸಮರ ಜೋರಾಗಿದೆ.

‘ಸೈಬರ್ ವಂಚನೆ ವರದಿ ಮಾಡುವ ಕಾರ್ಯವಿಧಾನದ ಅಗತ್ಯತೆ ಇದೆ. ಆದರೆ, ಮೊಬೈಲ್‌ಗಳಲ್ಲಿ ‘ಸಂಚಾರ ಸಾಥಿ’ ಆ್ಯಪ್‌ ಅಳವಡಿಕೆ ಕಡ್ಡಾಯಗೊಳಿಸುವಿಕೆಯಿಂದ ಬಳಕೆದಾರರ ಗೌಪ್ಯತೆ ಉಲ್ಲಂಘಿಸುವ ಸಾಧ್ಯತೆ ಹೆಚ್ಚಿದೆ’ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ADVERTISEMENT

‘ಇದು ಕೇವಲ ಒಂದು ವಿಷಯ ಮಾತ್ರವಲ್ಲ, ಬದಲಾಗಿ ಬಿಜೆಪಿ ನಾಯಕರು ದೇಶವನ್ನು ಸರ್ವಾಧಿಕಾರ ರಾಷ್ಟ್ರವನ್ನಾಗಿ ಪರಿವರ್ತಿಸುತ್ತಿದ್ದಾರೆ. ಸಂಸತ್ತು ಏಕೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ನೀವು ಪ್ರತಿದಿನ ನನ್ನನ್ನು ಕೇಳುತ್ತೀರಿ. ಏಕೆಂದರೆ ಆಡಳಿತ ಪಕ್ಷದ ನಾಯಕರು ಯಾವುದರ ಬಗ್ಗೆಯೂ ಮಾತನಾಡಲು ನಿರಾಕರಿಸುತ್ತಿದ್ದಾರೆ. ನಮ್ಮನ್ನು (ವಿಪಕ್ಷದವರು) ದೂಷಿಸುವುದು ತುಂಬಾ ಸುಲಭ. ಆದರೆ, ವಾಸ್ತವವೆಂದರೆ ಅವರು ಯಾವುದರ ಬಗ್ಗೆಯೂ ಚರ್ಚೆ ನಡೆಸಲು ಅವಕಾಶ ನೀಡುತ್ತಿಲ್ಲ’ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.

‘ಸೈಬರ್ ಭದ್ರತೆಯ ಕುರಿತು ಈಗಾಗಲೇ ವ್ಯಾಪಕ ಚರ್ಚೆ ನಡೆದಿದೆ. ವಂಚನೆ ಕುರಿತು ವರದಿ ಮಾಡುವುದಕ್ಕೆ ಸರಿಯಾದ ವ್ಯವಸ್ಥೆ ಅವಶ್ಯಕತೆಯಿದೆ. ‘ಸಂಚಾರ ಸಾಥಿ’ ಆ್ಯಪ್‌ ಅಳವಡಿಕೆ ಕಡ್ಡಾಯಗೊಳಿಸಿರುವ ಕೇಂದ್ರದ ನಿಯಮವು ಮೊಬೈಲ್ ಬಳಕೆದಾರರ ಗೌಪ್ಯತೆ ಉಲ್ಲಂಘಿಸಿದಂತಾಗುತ್ತದೆ’ ಎಂದೂ ಅವರು ಕಿಡಿಕಾರಿದ್ದಾರೆ.

ನಮ್ಮ ಪಕ್ಷವು (ಕಾಂಗ್ರೆಸ್) ಸಭೆ ನಡೆಸಿ ಈ ವಿಷಯದ ಬಗ್ಗೆ ಹೋರಾಟ ನಡೆಸಲು ತೀರ್ಮಾನಿಸಲಿದೆ ಎಂದೂ ಅವರು ಹೇಳಿದ್ದಾರೆ.

‘ಗೌಪ್ಯತೆಯ ಹಕ್ಕು ಎಂಬುದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಒಂದು ಆಂತರಿಕ ಅಂಶವಾಗಿದೆ. ಸ್ಮಾರ್ಟ್‌ಫೋನ್ ತಯಾರಕರು ಮತ್ತು ಆಮದುದಾರರು ‘ಸಂಚಾರ ಸಾಥಿ’ ಆ್ಯಪ್‌ ಅನ್ನು ಅಳಿಸಲಾಗದ ರೀತಿಯಲ್ಲಿ ಮೊದಲೇ ಲೋಡ್ ಮಾಡಲು ನಿರ್ದೇಶಿಸುವ ದೂರಸಂಪರ್ಕ ಇಲಾಖೆಯ ಸುತ್ತೋಲೆಯು ಈ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಇಂತಹ ಆದೇಶವು ವ್ಯಾಪಕವಾದ ಕಣ್ಗಾವಲಿಗೆ ಅನುವು ಮಾಡಿಕೊಡುತ್ತದೆ ಮತ್ತು ನಾಗರಿಕರ ಪ್ರತಿಯೊಂದು ಚಲನವಲನ, ಸಂವಹನ ಅಥವಾ ಸಂಸತ್ತಿನ ಮೇಲ್ವಿಚಾರಣೆಯಿಲ್ಲದೆ ನಿರಂತರ ಕಣ್ಗಾವಲಿನಲ್ಲಿ ಇರಿಸುವ ಬೆದರಿಕೆ ಒಡ್ಡುತ್ತದೆ’ ಎಂದು ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.