ADVERTISEMENT

ಟಿವಿ ಮಾಧ್ಯಮಗಳು ಮುಂಬೈನ‌ ರೆಡ್ ಲೈಟ್ ಏರಿಯಾಗಳಿದ್ದಂತೆ: ಡಿಎಂಕೆ ನಾಯಕ

ಏಜೆನ್ಸೀಸ್
Published 18 ಫೆಬ್ರುವರಿ 2020, 7:45 IST
Last Updated 18 ಫೆಬ್ರುವರಿ 2020, 7:45 IST
ಡಿಎಂಕೆ ನಾಯಕ ಆರ್.ಎಸ್. ಭಾರತಿ
ಡಿಎಂಕೆ ನಾಯಕ ಆರ್.ಎಸ್. ಭಾರತಿ   

ಚೆನ್ನೈ: ಟಿವಿ ಮಾಧ್ಯಮ ಮತ್ತು ಪತ್ರಕರ್ತರು ವೇಶ್ಯಾವಾಟಿಕೆ ಕೇಂದ್ರಗಳಾಗಿದ್ದು, ವಂಚನೆ ಮತ್ತು ಹಣವೇ ಅವರ ಪ್ರಾಥಮಿಕ ಧ್ಯೇಯ.ಮಾಧ್ಯಮ ಸಂಸ್ಥೆಗಳು ಮುಂಬೈನ ರೆಡ್‌ಲೈಟ್ ಏರಿಯಾಗಳಿದ್ದಂತೆ ಎಂದು ಹೇಳಿದ್ದ ಡಿಎಂಕೆ ನಾಯಕ ಆರ್.ಎಸ್. ಭಾರತಿ ತಮ್ಮ ಹೇಳಿಕೆ ಕುರಿತು ವಿಷಾದವ್ಯಕ್ತಪಡಿಸಿದ್ದಾರೆ.

ಡಿಎಂಕೆ ಹಿರಿಯ ನಾಯಕನ ಹೇಳಿಕೆಯನ್ನುತೀವ್ರವಾಗಿ ಟೀಕಿಸಿದ್ದ ಚೆನ್ನೈ ಪ್ರೆಸ್ ಕ್ಲಬ್,ಕೂಡಲೇ ಕ್ಷಮೆ ಕೇಳುವಂತೆ ಒತ್ತಾಯಿಸಿತ್ತು.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾಗಿರುವ ವಿಡಿಯೊದಲ್ಲಿ ಡಿಎಂಕೆ ನಾಯಕ ಭಾರತಿ, ಚುನಾವಣೆ ತಂತ್ರ ರೂಪಿಸಲು ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೂಡ ಜೆಡಿಯು ಉಚ್ಛಾಟಿತ ನಾಯಕ ಮತ್ತು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಅವರಿಂದ ಸಹಾಯ ಪಡೆದಿದ್ದರು. ಆಗ ಈ ವಿಚಾರವನ್ನು ಮಾಧ್ಯಮಗಳು ಏಕೆ ಚರ್ಚೆಗೆ ತೆಗೆದುಕೊಳ್ಳಲಿಲ್ಲ. ಆದರೆ, ಇದೇ ಪ್ರಶಾಂತ್ ಕಿಶೋರ್ ಅವರನ್ನು ಡಿಎಂಕೆ ಚುನಾವಣಾ ತಂತ್ರ ರೂಪಿಸಲು ಬಳಸುವಾಗ ಮಾತ್ರ ಮಾಧ್ಯಮಗಳು ಈ ಕುರಿತು ಚರ್ಚೆ ನಡೆಸುತ್ತವೆ ಏಕೆ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಚರ್ಚಿಸಲು ಹಲವಾರು ವಿಷಯಗಳಿದ್ದರೂ ಕೂಡ ಪ್ರಶಾಂತ್ ಕಿಶೋರ್ ಅವರನ್ನು ಡಿಎಂಕೆ ಬಳಸಿಕೊಂಡರೆ ಮಾಧ್ಯಮಗಳಲ್ಲಿ ತಪ್ಪು ಚರ್ಚೆಗಳು ನಡೆಯುತ್ತವೆ. ಕೆಲ ಜನರು ರೆಡ್ ಲೈಟ್ ಏರಿಯಾಗಳಲ್ಲಿ ಕೆಲಸ ಮಾಡುವಂತೆಯೇ ಇದ್ದಾರೆ. ಆದರೆ ನನ್ನ ಉದ್ದೇಶ ಯಾವುದೇ ಮಾಧ್ಯಮ ಸಂಸ್ಥೆಗಳನ್ನು ನೋಯಿಸುವುದಲ್ಲ. ನಮ್ಮ ನಾಯಕರು (ಸ್ಟಾಲಿನ್) ಹೇಳಿದ ಮೇಲೆ ತಪ್ಪಾಗಿರುವುದು ನನಗೆ ಅರಿವಾಗಿದೆ. ಹೀಗಾಗಿಯೇ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಭಾರತಿ ಹೇಳಿದ್ದಾರೆ.

ಈ ಕುರಿತು ಚೆನ್ನೈ ಪ್ರೆಸ್ ಕ್ಲಬ್‌ನ ಜಂಟಿ ಕಾರ್ಯದರ್ಶಿ ತಾಮಿಜಾನ್ ಪ್ರತಿಕ್ರಿಯಿಸಿ, ಪತ್ರಕರ್ತರು ಮತ್ತು ಮಾಧ್ಯಮಗಳನ್ನು ಗುರಿಯಾಗಿಸುವ ನಿದರ್ಶನಗಳು ಈಗ ಹೆಚ್ಚಾಗುತ್ತಿವೆ. ನಾಯಕರೊಬ್ಬರಿಂದ ವ್ಯಕ್ತವಾಗಿರುವ ಕೆಳಮಟ್ಟದ ಹೇಳಿಕೆಗಳನ್ನು ಚೆನ್ನೈ ಪ್ರೆಸ್ ಕ್ಲಬ್ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.