ADVERTISEMENT

ಆಡಿಯೊ ಕ್ಲಿಪ್‌ ವಿವಾದ: ಅಣ್ಣಾಮಲೈ ಮತ್ತು ಪಿಟಿಆರ್‌ ನಡುವೆ ಟ್ವೀಟ್‌ ವಾರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಏಪ್ರಿಲ್ 2023, 2:32 IST
Last Updated 23 ಏಪ್ರಿಲ್ 2023, 2:32 IST
ಪಳನಿವೇಲ್‌ ತ್ಯಾಗ ರಾಜನ್‌ ಮತ್ತು ಕೆ.ಅಣ್ಣಾಮಲೈ
ಪಳನಿವೇಲ್‌ ತ್ಯಾಗ ರಾಜನ್‌ ಮತ್ತು ಕೆ.ಅಣ್ಣಾಮಲೈ   

ತಮಿಳುನಾಡು : ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರ ಕುಟುಂಬದ ಸದಸ್ಯರ ಆಸ್ತಿಗಳ ಕುರಿತು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್‌ ತ್ಯಾಗ ರಾಜನ್‌(ಪಿಟಿಆರ್‌) ಅವರು ಕೆಲವು ರಹಸ್ಯ ಬಿಚ್ಚಿಟ್ಟಿದ್ದಾರೆ ಎಂದು ಅಣ್ಣಾಮಲೈ ಟ್ವೀಟ್‌ ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಿಟಿಆರ್‌, ‘ಇದೊಂದು ದುರುದ್ದೇಶಪೂರಿತ ಕೆಲಸವಾಗಿದ್ದು, ಆಡಿಯೊವನ್ನು ಯಾರೋ ಸೃಷ್ಟಿಸಿದ್ದಾರೆ‘ ಎಂದಿದ್ದಾರೆ.

ಇತ್ತೀಚೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಒಂದು ಆಡಿಯೊ ಕ್ಲಿಪ್‌ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು,‘ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಮತ್ತು ಅಳಿಯ ಶಬರೇಶನ್‌ ಅವರ ಆಸ್ತಿಗಳ ಬಗ್ಗೆ ಪಿಟಿಆರ್‌ ಕೆಲವು ರಹಸ್ಯ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ‘ ಎಂದು ಹೇಳಿದ್ದರು. ಈ ಆಡಿಯೊ ಕ್ಲಿಪ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ತಕ್ಷಣ ಎಚ್ಚೆತ್ತ ಪಿಟಿಆರ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.‘ಈಗಿನ ತಂತ್ರಜ್ಞಾನ ಬಳಸಿ ಯಾರು ಬೇಕಾದರೂ ಅಂತಹ ಆಡಿಯೊ ಕ್ಲಿಪ್‌ಗಳನ್ನು ಸೃಷ್ಟಿಸಬಹುದಾಗಿದೆ. ನಾನು ಮಾತನಾಡಿದ್ದೆನ್ನಲಾದ ಆಡಿಯೊ ಯಾರೋ ದುರುದ್ದೇಶಪೂರ್ವಕವಾಗಿ ಸೃಷ್ಟಿಸಿದ್ದಾರೆ. ಇದೊಂದು ನಕಲಿ ಆಡಿಯೊ‘ ಎಂದು ಟ್ವೀಟ್‌ ಮಾಡಿದ್ದಾರೆ. ಇಷ್ಟೇ ಅಲ್ಲದೇ ಅಣ್ಣಾಮಲೈ ಹಂಚಿಕೊಂಡಿರುವ ಆಡಿಯೊ ಕ್ಲಿಪ್‌ನ ಫೊರೆನ್ಸಿಕ್‌ ವಿಶ್ಲೇಷಣೆಯ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು ‘ನಕಲಿ‘ ಎಂದು ಬರೆದುಕೊಂಡಿದ್ದಾರೆ.

ಪಿಟಿಆರ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ‘ಆಡಿಯೊ ಮಾದರಿಯ ಫೊರೆನ್ಸಿಕ್‌ ವಿಶ್ಲೇಷಣೆಯನ್ನು ಡಿಎಂಕೆ ಮಾಡಿದೆ ಹೊರತು ಯಾವುದೇ ಸ್ವತಂತ್ರ ಸಂಸ್ಥೆ ಅಲ್ಲ. ಸ್ವತಂತ್ರ ಏಜೆನ್ಸಿ ಬಳಿ ಆಡಿಯೊ ಕ್ಲಿಪ್‌ ವಿಶ್ಲೇಷಣೆ ಮಾಡಲು ಹಣಕಾಸು ಸಚಿವರನ್ನು ಯಾರು ತಡೆದರು?‘ ಎಂದು ಕೇಳಿದ್ದಾರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.