ADVERTISEMENT

ದೇಶದಲ್ಲಿ ಇಂದು ಮತ್ತೆ 20 ಜನರಲ್ಲಿ ರೂಪಾಂತರಿ ಕೊರೊನಾ ದೃಢ

ಪಿಟಿಐ
Published 5 ಜನವರಿ 2021, 10:59 IST
Last Updated 5 ಜನವರಿ 2021, 10:59 IST
   

ನವದೆಹಲಿ: ಬ್ರಿಟನ್‌ನಲ್ಲಿ ಮೊದಲಿಗೆ ಪತ್ತೆಯಾಗಿದ್ದ ರೂಪಾಂತರಿತ ಕೊರೊನಾ ಸೋಂಕು ದೇಶದಲ್ಲಿ ಮತ್ತೆ 20 ಜನರಲ್ಲಿ ದೃಢಪಟ್ಟಿದ್ದು, ಇದರೊಂದಿಗೆ ಈ ಸೋಂಕಿತರ ಸಂಖ್ಯೆ 58ಕ್ಕೆ ಏರಿದೆ.

‌ಪುಣೆಯಲ್ಲಿ ಇರುವ ರಾಷ್ಟ್ರೀಯ ಸೂಕ್ಷ್ಮಾಣು ಜೀವಿ ಅಧ್ಯಯನ ಸಂಸ್ಥೆಯು ರೂಪಾಂತರಿತ ಕೊರೊನಾ ಸೋಂಕು ಇರುವುದನ್ನು ಗುರುತಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಸೋಂಕಿತ ಎಲ್ಲರನ್ನು ಆಯಾ ರಾಜ್ಯ ಸರ್ಕಾರಗಳು ಗುರುತಿಸಿರುವ ನಿಯೋಜಿತ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ. ಇವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದವರನ್ನೂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದೆ.

ADVERTISEMENT

ಬ್ರಿಟನ್‌ನಿಂದ ಮರಳಿದವರ ಸಹ ಪ್ರಯಾಣಿಕರು, ಕುಟುಂಬ ಸದಸ್ಯರು, ಇವರೊಂದಿಗೆ ಸಂಪರ್ಕಕ್ಕೆ ಬಂದಿದ್ದವರನ್ನು ಗುರುತಿಸುವ ಕಾರ್ಯ ನಡೆದಿದೆ.ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕಟ್ಟೆಚ್ಚರ ವಹಿಸುವ ಕುರಿತು ರಾಜ್ಯಗಳಿಗೆ ಅಗತ್ಯ ಸಲಹೆಗಳನ್ನು ನೀಡಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.

58 ರಲ್ಲಿ ನವದೆಹಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದಲ್ಲಿ 8, ಐಜಿಐಬಿಯಲ್ಲಿ 11, ಕೋಲ್ಕತ್ತದಲ್ಲಿ 1, ಹೈದರಾಬಾದ್‌ನಲ್ಲಿ 25 ಮತ್ತು ಬೆಂಗಳೂರಿನ ನಿಮ್ಹಾನ್ಸ್‌ ಪ್ರಯೋಗಾಲಯದಲ್ಲಿ 10 ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದೆ.

ಬ್ರಿಟನ್‌ನಲ್ಲಿ ಪತ್ತೆಯಾದ ರೂಪಾಂತರಿತ ಕೊರೊನಾ ಸೋಂಕು ಡೆನ್ಮಾರ್ಕ್, ನೆದರ್‌ಲ್ಯಾಂಡ್, ಆಸ್ಟ್ರೇಲಿಯ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್‌ ಮತ್ತು ಸಿಂಗಪುರದಲ್ಲೂ ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.