ADVERTISEMENT

ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆ ಸ್ಫೋಟ: ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿಗೆ ಗಾಯ

ಛತ್ತೀಸಗಢದ ದಾಂತೇವಾಡದಲ್ಲಿ ಘಟನೆ

ಪಿಟಿಐ
Published 2 ಡಿಸೆಂಬರ್ 2023, 6:04 IST
Last Updated 2 ಡಿಸೆಂಬರ್ 2023, 6:04 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ದಾಂತೇವಾಡ: ಛತ್ತೀಸಗಢದ ದಾಂತೇವಾಡ ಜಿಲ್ಲೆಯಲ್ಲಿ ಶನಿವಾರ ನಕ್ಸಲೀಯರು ಅಡಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡ ಪರಿಣಾಮ ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಬಾರ್ಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಇಂದ್ರಾವತಿ ನದಿಯ ಸೇತುವೆಯ ಬಳಿ ಮಾವೋವಾದಿಗಳು ಬ್ಯಾನರ್‌ನಲ್ಲಿ ಅಡಗಿಸಿಟ್ಟಿದ್ದ ಸ್ಫೋಟಕವನ್ನು ಭದ್ರತಾ ಸಿಬ್ಬಂದಿ ನಿಷ್ಕ್ರಿಯಗೊಳಿಸುತ್ತಿದ್ದಾಗ ಇಂದು ಬೆಳಿಗ್ಗೆ ಘಟನೆ ಸಂಭವಿಸಿದೆ' ಎಂದು ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

'ಇಂದಿನಿಂದ (ಡಿ.2) ಪ್ರಾರಂಭವಾಗುವ 'ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ' (ಪಿಎಲ್‌ಜಿಎ) ಸಪ್ತಾಹದ ಅಂಗವಾಗಿ ಬಾರ್ಸೂರು-ಪಲ್ಲಿ ಮಾರ್ಗದಲ್ಲಿ ನಕ್ಸಲೀಯರ ಚಲನವಲನದ ಬಗ್ಗೆ ಸುಳಿವಿನ ಮೇರೆಗೆ ಸಿಆರ್‌ಪಿಎಫ್‌ನ 195ನೇ ಬೆಟಾಲಿಯನ್ ತಂಡವನ್ನು ಅಲ್ಲಿಗೆ ರವಾನಿಸಲಾಗಿತ್ತು' ಎಂದು ಅಧಿಕಾರಿ ತಿಳಿಸಿದ್ದಾರೆ.

ಸೇತುವೆಯ ಬಳಿ ಮಾವೋವಾದಿಗಳು ಬ್ಯಾನರ್‌ನಲ್ಲಿ ಐಇಡಿ ಇಟ್ಟಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅದನ್ನು ನಿಷ್ಕ್ರಿಯಗೊಳಿಸಲು ಪ್ರಾರಂಭಿಸಿದರು. ಆದರೆ ಈ ಪ್ರಕ್ರಿಯೆಯಲ್ಲಿ ಅದು ಸ್ಫೋಟಗೊಂಡು ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಚಿಕಿತ್ಸೆಗಾಗಿ ಇಬ್ಬರು ಯೋಧರನ್ನು ವಿಮಾನದ ಮೂಲಕ ರಾಯಪುರಕ್ಕೆ ಕರೆದೊಯ್ಯಲಾಗಿದೆ. ಸದ್ಯ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸಿಆರ್‌ಪಿಎಫ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.