ADVERTISEMENT

ತಮಿಳುನಾಡಿನಲ್ಲಿ ₹1,112 ಕೋಟಿಯ 2 ಎಲೆಕ್ಟ್ರಾನಿಕ್ಸ್ ಕ್ಲಸ್ಟರ್: ವೈಷ್ಣವ್

ಪಿಟಿಐ
Published 15 ಮಾರ್ಚ್ 2025, 11:33 IST
Last Updated 15 ಮಾರ್ಚ್ 2025, 11:33 IST
ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್   

ಚೆನ್ನೈ: ತಮಿಳುನಾಡಿನಲ್ಲಿ ₹ 1,112 ಕೋಟಿ ಮೌಲ್ಯದ ಎರಡು ಎಲೆಕ್ಟ್ರಾನಿಕ್ಸ್ ಕ್ಲಸ್ಟರ್‌ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಚೆನ್ನೈನಿಂದ 55 ಕಿ.ಮೀ ದೂರದಲ್ಲಿರುವ ಶ್ರೀಪೆರಂಬದೂರಿನಲ್ಲಿ ’Zetwerk Electronics’ನ ಏಳನೇ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಎಲೆಕ್ಟ್ರಾನಿಕ್ಸ್ ಉದ್ಯಮವು ದೇಶದ ಎರಡನೇ ಅತಿದೊಡ್ಡ ರಫ್ತು ವಲಯವಾಗಿದೆ. ಕಳೆದ ದಶಕದಲ್ಲಿ ಹಲವಾರು ಸಾಂಪ್ರದಾಯಿಕ ಕೈಗಾರಿಕೆಗಳನ್ನು ಮೀರಿಸಿದೆ’ ಎಂದು ಹೇಳಿದ್ದಾರೆ.

₹1,000 ಕೋಟಿ ಹೂಡಿಕೆಯ ಭಾಗವಾಗಿರುವ ಈ ಹೊಸ ಸೌಲಭ್ಯವು ಗ್ರಾಹಕ ಬಾಳಿಕೆ ಬರುವ ವಸ್ತುಗಳು ಮತ್ತು ಐಟಿ ಹಾರ್ಡ್‌ವೇರ್ ಸೇರಿದಂತೆ ವಿವಿಧ ವಲಯಗಳಿಗೆ ಬೇಕಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಉತ್ಪಾದಿಸಲಿದೆ. ಭವಿಷ್ಯದಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೂ ವಿಸ್ತರಣೆಯಾಗಲಿದೆ.

ADVERTISEMENT

‘ತಮಿಳುನಾಡಿನಲ್ಲಿ ಎರಡು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್‌ಗಳನ್ನು ಸ್ಥಾಪಿಸಲು ಸರ್ಕಾರ ₹1,112 ಕೋಟಿ ಹೂಡಿಕೆ ಮಾಡಲಿದೆ. ಪಿಳ್ಳೈಪಕ್ಕಂ (ಕಾಂಚಿಪುರಂ) ಮತ್ತು ಮಣಲೂರು (ತಿರುವಳ್ಳೂರು ಜಿಲ್ಲೆ)ಯಲ್ಲಿ ಈ ಘಟಕಗಳು ಸ್ಥಾಪನೆಯಾಗಲಿವೆ. ಅವು ದೊಡ್ಡ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್‌ಗಳಾಗಲಿವೆ. ಈ ಎರಡು ಕ್ಲಸ್ಟರ್‌ಗಳು ತಮಿಳುನಾಡಿಗೆ ಮತ್ತು ದೇಶಕ್ಕೆ ದೊಡ್ಡ ಕೊಡುಗೆ ನೀಡಲಿದೆ’ ಎಂದು ಅವರು ಭಾಷಣದಲ್ಲಿ ಹೇಳಿದ್ದಾರೆ.

ಭಾರತದ ಎಲೆಕ್ಟ್ರಾನಿಕ್ ರಫ್ತುಗಳನ್ನು ಹೆಚ್ಚಿಸುವಲ್ಲಿ ಬೆಂಬಲ ನೀಡಿದ್ದಕ್ಕಾಗಿ ತಮಿಳುನಾಡು ಸೇರಿದಂತೆ ರಾಜ್ಯ ಸರ್ಕಾರಗಳಿಗೆ ಅವರು ಇದೇ ವೇಳೆ ಧನ್ಯವಾದ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.