ADVERTISEMENT

ಹೈದರಾಬಾದ್‌ನಲ್ಲಿ ಮತ್ತೆರಡು ಅತ್ಯಾಚಾರ ಪ್ರಕರಣ ಬಹಿರಂಗ!

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 2:09 IST
Last Updated 6 ಜೂನ್ 2022, 2:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹೈದರಾಬಾದ್‌: ಜುಬಿಲಿ ಹಿಲ್ಸ್‌ ಬಂಜಾರದಲ್ಲಿ 17 ವರ್ಷದ ಬಾಲಕಿ ಮೇಲೆ ಐವರು ಸೇರಿ ನಡೆಸಿದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆಘಾತದಿಂದ ಹೈದರಾಬಾದ್ ಹೊರಬರುವ ಮೊದಲೇ, ನಗರವು ಅಂಥದ್ದೇ ಮತ್ತೆರಡು ಸುದ್ದಿಯಿಂದ ತಲ್ಲಣಗೊಂಡಿದೆ.

ಮೇ 30 ಮತ್ತು 31ರಂದು ನಡೆದಿರುವ ಎರಡು ಪ್ರತ್ಯೇಕ ಪ್ರಕರಣಗಳು ಭಾನುವಾರ ಬೆಳಕಿಗೆ ಬಂದಿದೆ.

ಕ್ಯಾಬ್‌ ಚಾಲಕ ಮತ್ತು ಸಹಚರನಿಂದ ಅತ್ಯಾಚಾರ

ADVERTISEMENT

ಮೊಘಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 31ರಂದು ನಡೆದಿರುವ ಈ ಘಟನೆ ಬಹಿರಂಗವಾಗಿರುವುದು ಭಾನುವಾರ.

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೊ)ಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸುಲ್ತಾನ್ ಶಾಹಿ ಪ್ರದೇಶದ ಬಾಲಕಿಗೆ ಲಿಫ್ಟ್ ಕೊಡುವುದಾಗಿ ಹೇಳಿ ಕ್ಯಾಬ್ ಚಾಲಕ ಅಪಹರಿಸಿದ್ದ. ಆಕೆಯನ್ನು ಹೈದರಾಬಾದ್ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯ ಕೊಂಡೂರ್ಗ್ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಮರುದಿನ ಚಾಲಕ ಸಂತ್ರಸ್ತೆಯನ್ನು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಸಂತ್ರಸ್ತೆಯನ್ನು ಗಮನಿಸಿದ ಗಸ್ತು ಪೊಲೀಸರು ಮೊಘಲ್‌ಪುರ ಪೊಲೀಸ್‌ ಠಾಣೆಗೆ ಕರೆದೊಯ್ದು, ಆಕೆಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಇಬ್ಬರು ಆರೋಪಿಗಳು ಆಕೆಯ ಮೇಲೆ ದೌರ್ಜನ್ಯ ನಡೆಸಿರುವುದು ಗೊತ್ತಾಗಿದೆ.

ಪ್ರಕರಣದಲ್ಲಿ ಕ್ಯಾಬ್ ಚಾಲಕ ಶೇಖ್‌ ಕಲೀಮ್‌ ಅಲಿ ಮತ್ತು ಆತನ ಸ್ನೇಹಿತ ಲಕ್ಮಾನ್ ಅಹ್ಮದ್ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ಪೊಲೀಸರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

ಮತ್ತೊಂದು ಪ್ರಕರಣ

ಮೇ 30 ರಂದು ನಡೆದಿರುವ ಎರಡನೇ ಘಟನೆಯಲ್ಲಿ ವ್ಯಕ್ತಿಯೊಬ್ಬ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಚಾರ್ಮಿನಾರ್ ಬಳಿಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿ ಆಕೆಯನ್ನು ಆಮಿಷವೊಡ್ಡಿ ಲಂಗರ್ ಹೌಜ್ ಪ್ರದೇಶದಲ್ಲಿನ ತನ್ನ ಮನೆಗೆ ಕರೆದೊಯ್ದು, ದೌರ್ಜನ್ಯ ನಡೆಸಿದ್ದಾನೆ. ಮರುದಿನ ಆಕೆಯನ್ನು ಅಂಗಡಿಗೆ ಬಿಟ್ಟಿದ್ದ.

ಭಾನುವಾರ ಬಾಲಕಿ ಹೊಟ್ಟೆ ನೋವಿನಿಂದ ಬಳಲಿದ್ದು, ತಾಯಿಗೆ ಮಾಹಿತಿ ನೀಡಿದ್ದಾಳೆ. ವಿಚಾರಿಸಿದಾಗ ನಡೆದ ಘಟನೆಯನ್ನೆಲ್ಲಾ ಬಹಿರಂಗಪಡಿಸಿದ್ದಾಳೆ. ಸಂತ್ರಸ್ತೆಯ ತಾಯಿಯು ಕಾಲಾಪತ್ತರ್ ಪೊಲೀಸ್ ಠಾಣೆಗೆ ಬಂದು ಮೊಹಮ್ಮದ್ ಸುಫಿಯಾನ್ (21) ವಿರುದ್ಧ ದೂರು ದಾಖಲಿಸಿದ್ದು, ಆರೋಪಿ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.