ADVERTISEMENT

ಇಂಡಿಗೋ ವಿಮಾನದಲ್ಲಿ ಕುಡಿದು ಗಲಾಟೆ ಮಾಡಿದ ಪ್ರಯಾಣಿಕರಿಬ್ಬರ ಬಂಧನ

ಏರ್‌ ಇಂಡಿಯಾ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಈ ಪ್ರಕರಣ ನಡೆದಿದೆ.

ಪಿಟಿಐ
Published 9 ಜನವರಿ 2023, 11:00 IST
Last Updated 9 ಜನವರಿ 2023, 11:00 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಪಟ್ನಾ: ಮದ್ಯ ಸೇವಿಸಿ ವಿಮಾನದಲ್ಲಿ ಪ್ರಯಾಣಿಸಿದ ಆರೋಪ ಸಂಬಂಧ ಇಬ್ಬರನ್ನು ಇಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬಿಹಾರದ ಹಾಜಿಪುರ ಮೂಲದ ನಿತೀಶ್‌ ಮತ್ತು ರಾಹುಲ್‌ ಬಂಧಿತ ಆರೋಪಿಗಳು.

‘ದೆಹಲಿಯಿಂದ ಹೊರಟ ವಿಮಾನದಲ್ಲಿ ಇಬ್ಬರು ಮದ್ಯದ ಅಮಲಿನಲ್ಲಿ ಇರುವುದಾಗಿ ಇಂಡಿಗೋ ವಿಮಾನಯಾನ ಸಂಸ್ಥೆ ಲಿಖಿತ ದೂರು ನೀಡಿತ್ತು. ಹೀಗಾಗಿ ವಿಮಾನವು ಭಾನುವಾರ ರಾತ್ರಿ ಇಲ್ಲಿಗೆ ಬಂದಿಳಿದ ನಂತರ ಆರೋಪಿಗಳನ್ನು ಉಸಿರಾಟ ವಿಶ್ಲೇಷಣೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮದ್ಯ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಬಳಿಕ ಕಾನೂನು ಉಲ್ಲಂಘನೆ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ’ ಎಂದು ವಿಮಾನ ನಿಲ್ದಾಣ ಪೊಲೀಸ್‌ ಠಾಣೆಯ ಠಾಣಾಧಿಕಾರಿ (ಎಸ್‌ಎಚ್‌ಒ) ರಾಬರ್ಟ್‌ ಪೀಟರ್‌ ತಿಳಿಸಿದ್ದಾರೆ.

ADVERTISEMENT

‘ಸಿಬ್ಬಂದಿ ಅಥವಾ ಪ್ರಯಾಣಿಕರೊಂದಿಗೆ ದುರ್ವರ್ತನೆ ತೋರಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದೂ ಅವರು ತಿಳಿಸಿದ್ದಾರೆ.

ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.