ಕಮರಿಗೆ ಬಿದ್ದ ಸೇನಾ ವಾಹನ
(ಪಿಟಿಐ ಚಿತ್ರ)
ಶ್ರೀನಗರ: ಜಮ್ಮು–ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ಸೇನಾ ವಾಹನವೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ನಾಲ್ವರು ಯೋಧರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.
ಉತ್ತರ ಕಾಶ್ಮೀರದ ಎಸ್.ಕೆ ಪಾಯೆನ್ ಬಳಿ ಸೇನಾ ವಾಹನದ ನಿಯಂತ್ರಣ ತಪ್ಪಿದ್ದು, ಪಕ್ಕದಲ್ಲೆ ಇದ್ದ ಕಂದಕಕ್ಕೆ ಬಿದ್ದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ‘ಪ್ರತಿಕೂಲ ಹವಾಮಾನ ಮತ್ತು ದಟ್ಟ ಮಂಜು ಕವಿದಿದ್ದ ಪರಿಣಾಮ ಅಪಘಾತ ಸಂಭವಿಸಿದೆ’ ಎಂದು ಸೇನೆಯು ‘ಎಕ್ಸ್’ ಮೂಲಕ ತಿಳಿಸಿದೆ.
ಬಂಡಿಪೋರಾ ಜಿಲ್ಲೆಯಲ್ಲಿ ಕರ್ತವ್ಯದಲಿದ್ದ ಭಾರತೀಯ ಸೇನೆಯ ವಾಹನವೊಂದು ಪ್ರತಿಕೂಲ ಹವಾಮಾನ ಹಾಗೂ ಕಡಿಮೆ ಗೋಚರತೆ ಕಾರಣ ಸ್ಕಿಡ್ ಆಗಿ ಕಮರಿಗೆ ಬಿದ್ದಿದೆ. ಅವಘಡದಲ್ಲಿ ಮೂವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಸೇನೆಯ ಚಿನಾರ್ ಕಾರ್ಪ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
'ಸ್ಥಳೀಯರ ಸಹಾಯದಿಂದ ಗಾಯಗೊಂಡ ಸೈನಿಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತೆಗೆ ಸಾಗಿಸಲಾಯಿತು. ಸಹಕರಿಸಿದ ಸ್ಥಳೀಯರಿಗೆ ಕೃತಜ್ಞತೆಗಳು. ದುಃಖತಪ್ತ ಕುಟುಂಬಗಳಿಗೆ ಸಂತಾಪಗಳು' ಎಂದು ಸೇನೆಯು ಪೋಸ್ಟ್‌ನಲ್ಲಿ ಬರೆದುಕೊಂಡಿದೆ.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಹುತಾತ್ಮರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.