ADVERTISEMENT

Guillain Barre: ಆಂಧ್ರದಲ್ಲಿ 2 ಸಾವು; ಬೇಯದ ಚಿಕನ್ ತಿನ್ನದಂತೆ ಮಹಾ DCM ಮನವಿ

ಪಿಟಿಐ
Published 17 ಫೆಬ್ರುವರಿ 2025, 10:12 IST
Last Updated 17 ಫೆಬ್ರುವರಿ 2025, 10:12 IST
   

ಅಮರಾವತಿ, ಪುಣೆ: ದೇಹದ ಪ್ರತಿರೋಧ ವ್ಯವಸ್ಥೆಯು ನರಮಂಡಲದ ಮೇಲೆ ದಾಳಿ ಮಾಡುವ ವಿಚಿತ್ರ ಕಾಯಿಲೆ ಗೀಲನ್ ಬಾ ಸಿಂಡ್ರೋಮ್‌ಗೆ (GBS) ಆಂಧ್ರದಲ್ಲಿ ಮಹಿಳೆ ಹಾಗೂ ಒಬ್ಬ ಬಾಲಕ ಮೃತಪಟ್ಟಿದ್ದಾರೆ.

‘ಗುಂಟೂರಿನಲ್ಲಿ ಕಮಲಮ್ಮ ಎಂಬುವವರು ಹಾಗೂ ಶ್ರೀಕಾಕುಲಮ್‌ನಲ್ಲಿ ಬಾಲಕನೊಬ್ಬ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದಲ್ಲಿ ಸದ್ಯ 17 ಸಕ್ರೀಯ ಪ್ರಕರಣಗಳಿವೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಇಬ್ಬರಲ್ಲಿ ಈ ಸೋಂಕು ಕಂಡುಬಂದಿದೆ. ಇದೊಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು. ಏಕಾಏಕಿ ಎದುರಾಗಿಲ್ಲ’ ಎಂದು ಆರೋಗ್ಯ ಸಚಿವ ಸತ್ಯ ಕುಮಾರ್ ಯಾದವ್ ತಿಳಿಸಿದ್ದಾರೆ.

‘2024ರಲ್ಲಿ ಒಟ್ಟು 267 ಜಿಬಿಎಸ್ ಪ್ರಕರಣಗಳು ಕಂಡುಬಂದಿದ್ದವು. ಇದರಲ್ಲಿ ವರ್ಷದ ಮೊದಲಾರ್ಧದಲ್ಲಿ 141 ಹಾಗೂ ದ್ವಿತೀಯಾರ್ಧದಲ್ಲಿ 126 ಪ್ರಕರಣಗಳು ದಾಖಲಾಗಿದ್ದವು. ಅಂದರೆ ತಿಂಗಳ ಸರಾಸರಿ 25 ಮೀರಿಲ್ಲ. ಈ ಸೋಂಕಿಗೆ ಒಳಗಾದವರು ಸಾಮಾನ್ಯ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಕೆಲವೇ ಕೆಲವು ಗಂಭೀರ ಪ್ರಕರಣಗಳಿಗೆ ಇಮ್ಯುನೊಗ್ಲಾಬ್ಯುಲಿನ್‌ ಚುಚ್ಚುಮದ್ದು ಪಡೆಯಬೇಕು. ಈ ಸೋಂಕಿನಿಂದ  ದೇಹದ ರೋಗನಿರೋಧಕ ವ್ಯವಸ್ಥೆಯು ತಪ್ಪಾಗಿ ನರವ್ಯೂಹದ ಮೇಲೆ ದಾಳಿ ನಡೆಸುತ್ತದೆ. ಇದರಿಂದ ಮಾಂಸಖಂಡದಲ್ಲಿ ದುರ್ಬಲತೆ, ಮರಗಟ್ಟುವಿಕೆ ಹಾಗೂ ಜುಮ್ಮೆನಿಸುವಿಕೆಯ ಅನುಭವವಾಗಲಿದೆ. ತೀವ್ರ ಸಮಸ್ಯೆಗೆ ಒಳಗಾದವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡುವುದು ಅನಿವಾರ್ಯ’ ಎಂದಿದ್ದಾರೆ.

ADVERTISEMENT

ಅರೆಬರೆ ಬೆಂದ ಚಿಕನ್ ತಿನ್ನಬೇಡಿ: ಮಹಾರಾಷ್ಟ್ರ ಡಿಸಿಎಂ ಅಜಿತ್

ಮಹಾರಾಷ್ಟ್ರದಲ್ಲಿ GBS ಉಲ್ಬಣಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಅರೆಬರೆ ಬೆಂದ ಕೋಳಿಯ ಖಾದ್ಯವನ್ನು ಜನರು ಸೇವಿಸಬಾರದು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮನವಿ ಮಾಡಿಕೊಂಡಿದ್ದಾರೆ.

‘ಪುಣೆಯ ಖಡಕ್‌ವಾಸ್ಲಾ ಡ್ಯಾಂ ಬಳಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಇದು ಕಲುಷಿತ ನೀರಿನಿಂದ ಹರಡಿದೆ ಎಂದು ಕೆಲವರು ಹೇಳಿದ್ದರು. ಇನ್ನೂ ಕೆಲವರು ಕೋಳಿ ಖಾದ್ಯ ಸೇವನೆಯಿಂದ ಹರಡುತ್ತಿದೆ ಎಂದೆನ್ನುತ್ತಿದ್ದಾರೆ. ಈ ಕುರಿತು ಕೂಲಂಕಷವಾಗಿ ತಪಾಸಣೆ ನಡೆಸಲಾಗಿದ್ದು, ಕೋಳಿಗಳನ್ನು ಕೊಲ್ಲುವ ಅವಕಶ್ಯತೆ ಇಲ್ಲ. ಆದರೆ ಕೋಳಿ ಮಾಂಸ ತಿನ್ನುವ ಅಭ್ಯಾಸ ಇರುವವರು, ಸಮರ್ಪಕವಾಗಿ ಬೇಯಿಸಿ ತಿನ್ನುವುದನ್ನು ರೂಢಿಸಿಕೊಳ್ಳಬೇಕು’ ಎಂದಿದ್ದಾರೆ.

ನೀರು ಮತ್ತು ಆಹಾರದಲ್ಲಿ ಬೆಳೆಯುವ ಕ್ಯಾಂಪಿಲೋಬ್ಯಾಕ್ಟರ್‌ ಜಿಜುನಿ ಎಂಬ ಬ್ಯಾಕ್ಟೀರಿಯಾ ಈ ಸೋಂಕು ಹರಡಲು ಕಾರಣ. ಹೀಗಾಗಿ ಆಹಾರವನ್ನು ಚೆನ್ನಾಗಿ ಬೇಯಿಸಿದ ನಂತರವೇ ತಿನ್ನಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಶನಿವಾರ ಮತ್ತೊಂದು ಹೊಸ ಪ್ರಕರಣ ಪತ್ತೆಯಾಗಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 208ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.