ADVERTISEMENT

ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

ಪಿಟಿಐ
Published 13 ಡಿಸೆಂಬರ್ 2020, 16:14 IST
Last Updated 13 ಡಿಸೆಂಬರ್ 2020, 16:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಮ್ಮು: ‘ಇಲ್ಲಿನ ಪೂಂಚ್‌ ಜಿಲ್ಲೆಯ ಸುರಾನ್‌ಕೋಟ್‌ನಲ್ಲಿ ಭಾನುವಾರ ಬೆಳಿಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಯ ಸಿಬ್ಬಂದಿ, ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದು, ಇನ್ನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಮೂರು ದಿನಗಳ ಹಿಂದೆ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಮೂಲಕ ಭಾರತದೊಳಗೆ ನುಸುಳಿರುವ ಈ ಉಗ್ರರು ದಕ್ಷಿಣ ಕಾಶ್ಮೀರದ ಸೋಪಿಯಾನ್‌ ಜಿಲ್ಲೆಯತ್ತ ಸಾಗಿದ್ದರು. ಈ ಕುರಿತ ಮಾಹಿತಿ ಲಭ್ಯವಾದ ಕೂಡಲೇ ಪೊಲೀಸ್‌ ಹಾಗೂ ಭದ್ರತಾ ಸಿಬ್ಬಂದಿಯನ್ನೊಳಗೊಂಡ ತಂಡವು ಛತ್ತಪಾನಿ–ದುಗ್ರಾನ್‌ ಗ್ರಾಮಕ್ಕೆ ಧಾವಿಸಿ ಪತ್ತೆ ಕಾರ್ಯ ಆರಂಭಿಸಿತ್ತು. ಹಿಮದಿಂದ ಆವೃತ್ತವಾಗಿದ್ದ ಪ್ರದೇಶದಲ್ಲಿ ಮೂವರು ಸಾಗುತ್ತಿದ್ದರು. ಶರಣಾಗುವಂತೆ ಅವರಿಗೆ ತಿಳಿಸಲಾಯಿತು. ಇದಕ್ಕೆ ಒಪ್ಪದ ಅವರು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆಗ ನಮ್ಮ ತಂಡದವರು ಪ್ರತಿದಾಳಿ ನಡೆಸಿದರು. ಈ ವೇಳೆ ಇಬ್ಬರನ್ನು ಹೊಡೆದುರುಳಿಸಲಾಯಿತು. ಇನ್ನೊಬ್ಬನನ್ನು ಸೆರೆ ಹಿಡಿಯಲಾಯಿತು’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಡಿಸಿ ಚುನಾವಣೆ ಶಾಂತವಾಗಿ ನಡೆಯುತ್ತಿದ್ದು, ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದನ್ನು ಸಹಿಸದ ಲಷ್ಕರ್‌ ಇ ತೊಯಿಬಾ (ಎಲ್‌ಇಟಿ) ಮತ್ತು ಜೈಷ್‌ ಎ ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಯವರು ತಮ್ಮ ಸದಸ್ಯರ ಮೂಲಕ ಈ ಭಾಗದಲ್ಲಿ ಶಾಂತಿ ಕದಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಹತ್ಯೆಯಾಗಿರುವ ಉಗ್ರರು ಪಾಕಿಸ್ತಾನದ ಪ್ರಜೆಗಳಾಗಿರುವ ಶಂಕೆ ಇದೆ. ಅವರ ಗುರುತು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ’ ಎಂದೂ ಅಧಿಕಾರಿಗಳು ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.