ರಾಜ್ ಠಾಕ್ರೆ ಹಾಗೂ ಉದ್ಧವ್ ಠಾಕ್ರೆ
ಪಿಟಿಐ ಚಿತ್ರ
ಮುಂಬೈ: ಶಿವಸೇನಾ (ಯುಬಿಟಿ) ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಪಕ್ಷಗಳು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆಗೆ ಮೈತ್ರಿ ಮಾಡಿಕೊಳ್ಳಲಿವೆ ಎಂಬ ವದಂತಿಗಳ ನಡುವೆ ಎರಡೂ ಪಕ್ಷಗಳ ಮುಖ್ಯಸ್ಥರು ಬುಧವಾರ ಭೇಟಿಯಾಗಿದ್ದಾರೆ.
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನಾ (ಯುಬಿಟಿ) ಮುಖ್ಯಸ್ಥ ಯುದ್ಧವ್ ಠಾಕ್ರೆ ಅವರು ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅವರ ನಿವಾಸ 'ಶಿವತೀರ್ಥ'ದಲ್ಲಿ ಬುಧವಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. 'ಶಿವತೀರ್ಥ' – ಮುಂಬೈನ ದಾದರ್ ಪ್ರದೇಶದಲ್ಲಿದೆ.
ವಿಶೇಷವೆಂದರೆ, ಕಾಂಗ್ರೆಸ್ ನಾಯಕರು ಸೋಮವಾರವಷ್ಟೇ ಉದ್ಧವ್ ಅವರನ್ನು ಭೇಟಿಯಾಗಿದ್ದರು. ಏತನ್ಮಧ್ಯೆ, ಸೇನಾ, ಎಂಎನ್‌ಎಸ್ ಮೈತ್ರಿ ವಿಚಾರ ಮುನ್ನಲೆಗೆ ಬಂದಿದೆ. ತನ್ನ ಮಿತ್ರ ಪಕ್ಷವಾಗಿರುವ ಸೇನಾದ ಮುಂದಿನ ನಡೆ ಕುರಿತು ಹೈಕಮಾಂಡ್ ಚರ್ಚಿಸಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಉದ್ಧವ್ ಮತ್ತೆ 'ಶಿವತೀರ್ಥ'ಕ್ಕೆ
ಬಹು ಸಮಯದಿಂದ ಅಂತರ ಕಾಯ್ದುಕೊಂಡಿದ್ದ 'ಠಾಕ್ರೆ' ಸಹೋದರರು ಜುಲೈನಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಮರಾಠಿ ಭಾಷೆ, ರಾಜ್ಯದ ವಿಚಾರವಾಗಿ ಒಂದಾಗುತ್ತಿರುವುದಾಗಿ ಇಬ್ಬರೂ ಹೇಳಿಕೊಂಡಿದ್ದರು. ಹೀಗಾಗಿ, ಇವರಿಬ್ಬರ ಪಕ್ಷಗಳು ರಾಜಕೀಯವಾಗಿ ಒಂದಾಗಲಿವೆ ಎಂಬ ಚರ್ಚೆಗಳು ಬಿರುಸು ಪಡೆದುಕೊಂಡಿವೆ.
ಉದ್ಧವ್ ಅವರು ಕೆಲವೇ ದಿನಗಳ ಅಂತರದಲ್ಲಿ 'ಶಿವತೀರ್ಥ'ಕ್ಕೆ ನೀಡಿದ ಎರಡನೇ ಭೇಟಿ ಇದಾಗಿದೆ. ಗಣೇಶೋತ್ಸವ ಆಚರಣೆ ಸಲುವಾಗಿ ಉದ್ಧವ್ ಅವರು ಹದಿನೈದು ದಿನಗಳ ಹಿಂದಷ್ಟೇ ರಾಜ್ ಮನೆಗೆ ಹೋಗಿದ್ದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಸೇನಾ ಸಂಸದ ಸಂಜಯ್ ರಾವುತ್, ಉದ್ಧವ್ ಅವರು ತಮ್ಮ ತಾಯಿಯ ಸಹೋದರಿ ಹಾಗೂ ರಾಜ್ ಅವರ ತಾಯಿ ಕುಂದಾ ಅವರನ್ನು ಭೇಟಿಯಾಗುವ ಸಲುವಾಗಿ 'ಶಿವತೀರ್ಥ'ಕ್ಕೆ ಹೋಗಿದ್ದಾರೆ. ಇದಕ್ಕೆ ರಾಜಕೀಯ ಅರ್ಥ ನೀಡಬೇಕಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.