
ಮದುರೆ: ‘ಸನಾತನ ಧರ್ಮ’ ಕುರಿತು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ನೀಡಿದ್ದ ಹೇಳಿಕೆಗಳನ್ನು ತಿರುಚಿದ ಆರೋಪದಡಿ ಬಿಜೆಪಿ ನಾಯಕ ಅಮಿತ್ ಮಾಳವೀಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಿ ಮದ್ರಾಸ್ ಹೈಕೋರ್ಟ್‌ನ ಮದುರೆ ಪೀಠ ಆದೇಶಿಸಿದೆ.
‘ಉದಯನಿಧಿ ಅವರು ಸನಾತನ ಧರ್ಮ ಕುರಿತು ನೀಡಿರುವ ಹೇಳಿಕೆಗಳು ದ್ವೇಷ ಭಾಷಣಕ್ಕೆ ಸಮವಾಗಿದ್ದು, ಅದನ್ನು ಪ್ರಶ್ನೆ ಮಾಡಿರುವುದು ಪ್ರತಿಕ್ರಿಯೆಯಷ್ಟೆ’ ಎಂದೂ ನ್ಯಾಯಪೀಠ ಹೇಳಿದೆ.
‘ದ್ವೇಷ ಭಾಷಣ’ ಮಾಡಿದವರನ್ನು ಬಿಟ್ಟು, ಅದಕ್ಕೆ ಪ್ರತಿಕ್ರಿಯಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ’ ಎಂದು ನ್ಯಾಯಮೂರ್ತಿ ಎಸ್.ಶ್ರೀಮತಿ ಅವರು ಇದ್ದ ಏಕಸದಸ್ಯ ಪೀಠ ಹೇಳಿದೆ.
ತಮ್ಮ ವಿರುದ್ಧ ತಿರುಚಿರಾಪಳ್ಳಿ ನಗರ ಠಾಣೆ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಸಲ್ಲಿಸಿದ್ದ ಮೂಲ ಕ್ರಿಮಿನಲ್ ಮೇಲ್ಮನವಿಯನ್ನು ಪುರಸ್ಕರಿಸಿದ ಪೀಠ, ‘ಅರ್ಜಿದಾರ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದ್ದೇ ಆದಲ್ಲಿ, ಅದು ಕಾನೂನುಪ್ರಕ್ರಿಯೆಯ ದುರ್ಬಳಕೆಯಾಗಲಿದೆ’ ಎಂದು ಹೇಳಿದೆ.
2023ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನು ಮಲೇರಿಯಾ, ಡೆಂಗಿಯಂತಹ ಕಾಯಿಲೆಗಳೀಗೆ ಹೋಲಿಸಿದ್ದರಲ್ಲೇ, ‘ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು’ ಎಂದು ಕರೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಳವೀಯ, ‘ದೇಶದ ಜನಸಂಖ್ಯೆಯ ಶೇ 80ರಷ್ಟು ಜನರು ಸನಾತನ ಧರ್ಮವನ್ನು ಪಾಲಿಸುತ್ತಿದ್ದಾರೆ. ಉದಯನಿಧಿ ಅವರ ಹೇಳಿಕೆಯು ಈ ಧರ್ಮ ಪಾಲನೆ ಮಾಡುವವರ ಸಾಮೂಹಿಕ ಹತ್ಯೆಗೆ ಕರೆ ಕೊಟ್ಟಂತೆ ಆಗಿದೆ’ ಎಂದು ಹೇಳಿದ್ದರು.
ಈ ಕುರಿತು ತಿರುಚಿರಾಪಳ್ಳಿಯ ಡಿಎಂಕೆ ಪದಾಧಿಕಾರಿ ಕೆಎವಿ ದಿನಕರನ್ ನೀಡಿದ ದೂರು ಆಧರಿಸಿ ಮಾಳವೀಯ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ವಿಚಾರಣೆ ವೇಳೆ, ‘ಒಂದು ವೇಳೆ, ವಿಚಾರಣೆ ಮುಂದುವರಿದಲ್ಲಿ ಅದರಿಂದ ಅರ್ಜಿದಾರರು ಸರಿಪಡಿಸಲಾಗದ ಹಾನಿ, ನೋವು ಅನುಭವಿಸಬೇಕಾಗುತ್ತದೆ. ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದತಿಗೆ ಅರ್ಜಿದಾರ ಅರ್ಹರಾಗಿದ್ದಾರೆ’ ಎಂದು ನ್ಯಾಯಪೀಠ ಹೇಳಿದೆ.
‘ದ್ವೇಷ ಭಾಷಣ ಮಾಡುವ ವ್ಯಕ್ತಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಆದರೆ, ಇಂತಹ ಭಾಷಣ ಕುರಿತು ಪ್ರತಿಕ್ರಿಯಿಸುವವರು ಕಾನೂನಿನ ಬಿಸಿ ಅನುಭವಿಸಬೇಕು ಎಂಬಂತಹ ಸನ್ನಿವೇಶ ಈಗ ಇದೆ. ಈ ಮಾತನ್ನು ಬಹಳ ನೋವಿನಿಂದ ಹೇಳಬೇಕಿದೆ’ ಎಂದು ನ್ಯಾಯಾಲಯ ಹೇಳಿದೆ.
‘ಈ ಪ್ರಕರಣದಲ್ಲಿ, ದ್ವೇಷ ಭಾಷಣ ಮಾಡಿರುವ ಉಪಮುಖ್ಯಮಂತ್ರಿ ವಿರುದ್ಧ ತಮಿಳುನಾಡಿನಲ್ಲಿ ಪ್ರಕರಣ ದಾಖಲಾಗಿಲ್ಲ. ಬೇರೆ ಕೆಲ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ’ ಎಂದು ಆದೇಶದಲ್ಲಿ ಹೇಳಲಾಗಿದೆ.
‘ಮಹಾತ್ಮ ಗಾಂಧಿ, ಮಾಜಿ ಮುಖ್ಯಮಂತ್ರಿ ಕೆ.ಕಾಮರಾಜ ಸೇರಿ ಅನೇಕ ಗಣ್ಯರು ಸನಾತನ ಧರ್ಮ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸನಾತನ ಧರ್ಮ ಅನುಯಾಯಿಗಳು ಪಾಲನೆ ಮಾಡುತ್ತಿದ್ದ ಕೆಲ ಅನಗತ್ಯ ಆಚರಣೆಗಳನ್ನು ಕೈಬಿಡಬೇಕು ಎಂಬುದಷ್ಟೆ ಅವರ ಬಯಕೆಯಾಗಿತ್ತು. ಇ.ವಿ.ರಾಮಸ್ವಾಮಿ ಅಲಿಯಾಸ್ ಪೆರಿಯಾರ್ ಹೊರತುಪಡಿಸಿದಂತೆ ಇತರ ಮಹನೀಯರು ಸನಾತನ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿಲ್ಲ’ ಎಂಬ ಪ್ರತಿವಾದಿಯ ಹೇಳಿಕೆಯನ್ನು ಸಹ ನ್ಯಾಯಾಲಯ ಪರಿಗಣಿಸಿದೆ.
‘ಅಧಿಕಾರಿಗಳು ರಾಜಕೀಯದಿಂದ ದೂರ ಇರಬೇಕು. ರಾಜಕೀಯ ಪಕ್ಷವೊಂದರ ಪರ ನಿಲ್ಲುವುದು ಖಂಡನೀಯ’ ಎಂದು ಪೊಲೀಸರನ್ನು ಉದ್ದೇಶಿಸಿ ನ್ಯಾಯಮೂರ್ತಿ ಶ್ರೀಮತಿ ಹೇಳಿದರು.
ದೂರುದಾರ ಗೈರಾಗಿದ್ದರು. ಅವರ ಪರ ವಕೀಲರು ಸಹ ನ್ಯಾಯಾಲಯದಲ್ಲಿ ಹಾಜರಿರಲಿಲ್ಲ.
ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಭಾಷಣ ಶೇಕಡ 80ರಷ್ಟಿರುವ ಹಿಂದೂಗಳ ವಿರುದ್ಧವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಅವರು ಆಡಿದ ಮಾತುಗಳು ದ್ವೇಷಭಾಷಣ ವ್ಯಾಪ್ತಿಗೆ ಒಳಪಡುತ್ತದೆ.– ನ್ಯಾಯಮೂರ್ತಿ ಎಸ್.ಶ್ರೀಮತಿ, ಮದುರೆ ಪೀಠ ಮದ್ರಾಸ್ ಹೈಕೋರ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.