ನವದೆಹಲಿ: ‘2025ರ ಶೈಕ್ಷಣಿಕ ವರ್ಷದಿಂದ ಮನೋವಿಜ್ಞಾನ, ಪೌಷ್ಟಿಕಾಂಶ, ಆರೋಗ್ಯರಕ್ಷಣೆ ಮತ್ತು ಸಂಬಂಧಿತ ಕೋರ್ಸ್‌ಗಳನ್ನು ಮುಕ್ತ ಮತ್ತು ದೂರಶಿಕ್ಷಣ ಅಥವಾ ಆನ್‌ಲೈನ್ ವಿಧಾನದಲ್ಲಿ ಕಲಿಸುವುದನ್ನು ಸ್ಥಗಿತಗೊಳಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
ಈ ನಿಷೇಧವು ಎನ್‌ಸಿಎಎಚ್‌ಪಿ ಕಾಯ್ದೆ– 2021 ಮತ್ತು ದೂರಶಿಕ್ಷಣ ಕಾರ್ಯಗುಂಪಿನ ಶಿಫಾರಸುಗಳನ್ನು ಆಧರಿಸಿದೆ. ಮನೋವಿಜ್ಞಾನ, ಸೂಕ್ಷ್ಮ ಜೀವವಿಜ್ಞಾನ, ಆಹಾರ ಮತ್ತು ಪೌಷ್ಟಿಕಾಂಶ ವಿಜ್ಞಾನ, ಜೈವಿಕ ತಂತ್ರಜ್ಞಾನ, ಕ್ಲಿನಿಕಲ್ ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿಗಳು ಈ ಕಾಯ್ದೆಗೆ ಒಳಪಡುತ್ತವೆ.
‘ಜುಲೈ–ಆಗಸ್ಟ್ 2025ರ ನಂತರ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಗಳು ಮುಕ್ತ ಹಾಗೂ ದೂರಶಿಕ್ಷಣ ಕಲಿಕೆ ಅಥವಾ ಆನ್‌ಲೈನ್ ವಿಧಾನದಲ್ಲಿ ಎನ್‌ಸಿಎಎಚ್‌ಪಿ 2021 ಕಾಯ್ದೆಗೆ ಒಳಪಡುವ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಕೋರ್ಸ್‌ಗಳಿಗೆ ಪ್ರವೇಶವಕಾಶ ನೀಡಬಾರದು. ಒಂದೊಮ್ಮೆ ಕಲಿಕೆಗೆ ಮಾನ್ಯತೆ ನೀಡಿದ್ದರೆ ನೀಡಿದ್ದರೆ, ಅದನ್ನು ಯುಜಿಸಿ ಹಿಂದಕ್ಕೆ ಪಡೆಯಲಿದೆ’ ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ.
ಬಿ.ಎ ಪದವಿಯ ಕೋರ್ಸ್‌ಗಳಲ್ಲಿ ಒಂದಕ್ಕಿಂತ ಹೆಚ್ಚು ವಿಷಯಗಳಿದ್ದು (ಇಂಗ್ಲಿಷ್, ಹಿಂದಿ, ಪಂಜಾಬಿ, ಅರ್ಥಶಾಸ್ತ್ರ, ಇತಿಹಾಸ, ಗಣಿತ, ಸಾರ್ವಜನಿಕ ಆಡಳಿತ, ತತ್ವಶಾಸ್ತ್ರ, ರಾಜಕೀಯ ವಿಜ್ಞಾನ, ಸಂಖ್ಯಾಶಾಸ್ತ್ರ, ಮಾನವ ಹಕ್ಕುಗಳು ಮತ್ತು ಕರ್ತ್ಯವಗಳು, ಸಂಸ್ಕೃತ, ಮನೋವಿಜ್ಞಾನ, ಭೂಗರ್ಭವಿಜ್ಞಾನ, ಮಹಿಳಾ ಸಂಬಂಧಿ ಅಧ್ಯಯನಗಳು) ಇದರಲ್ಲಿ ಎನ್‌ಸಿಎಎಚ್‌ಪಿ ಕಾಯ್ದೆ 2021ಕ್ಕೆ ಒಳಪಡುವ ವಿಷಯಗಳಿದ್ದರೆ, ಅವುಗಳನ್ನು ಮಾತ್ರ ಹಿಂದಕ್ಕೆ ಪಡೆಯಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.
ವೃತ್ತಿಪರ ತರಬೇತಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಎನ್‌ಸಿಎಎಚ್‌ಪಿ ಕಾಯ್ದೆಗೆ ಒಳಪಡುವ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಂತೆ ಸಂಸ್ಥೆಗಳಿಗೆ ಯುಜಿಸಿ ನಿರ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.