ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಇದೇ 15ರಂದು ನಿಗದಿಪಡಿಸಿದ್ದ ‘ಯುಜಿಸಿ– ಎನ್‌ಇಟಿ’ ಪರೀಕ್ಷೆಯನ್ನು ಮಕರ ಸಂಕ್ರಾಂತಿ ಮತ್ತು ಪೊಂಗಲ್ ಹಬ್ಬದ ಕಾರಣ ಮುಂದೂಡಿದೆ.
ಪಿಎಚ್.ಡಿ ಪ್ರವೇಶ, ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಅರ್ಹತೆಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯು (ಎನ್‌ಇಟಿ) ಜನವರಿ 3ರಿಂದ ಆರಂಭವಾಗಿದ್ದು, 16ರವರೆಗೆ ನಿಗದಿಯಾಗಿತ್ತು. ಇದು ಕಂಪ್ಯೂಟರ್ ಆಧರಿತ ಪರೀಕ್ಷೆಯಾಗಿದ್ದು (ಸಿಬಿಟಿ) 85 ವಿಷಯಗಳಲ್ಲಿ ನಡೆಯಲಿದೆ.
‘ಇದೇ 15ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಪರೀಕ್ಷೆಯ ಮುಂದಿನ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು. ಇದೇ 16ರ ಪರೀಕ್ಷೆಯು ನಿಗದಿಯಂತೆ ನಡೆಯಲಿದೆ’ ಎಂದು ಎನ್‌ಟಿಎ ನಿರ್ದೇಶಕ (ಪರೀಕ್ಷೆ) ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.