ADVERTISEMENT

ವಾಂಗ್ಚೂಕ್ ಶಿಕ್ಷಣ ಸಂಸ್ಥೆಗೆ ಯುಜಿಸಿ ಮಾನ್ಯತೆ ನೀಡಿ: ಸ್ಥಾಯಿ ಸಮಿತಿ ಶಿಫಾರಸು

ಪಿಟಿಐ
Published 14 ಡಿಸೆಂಬರ್ 2025, 13:37 IST
Last Updated 14 ಡಿಸೆಂಬರ್ 2025, 13:37 IST
   

ನವದೆಹಲಿ: ‘ಪರಿಸರ ಹೋರಾಟಗಾರ ಮತ್ತು ಶಿಕ್ಷಣ ತಜ್ಞ ಸೊನಮ್‌ ವಾಂಗ್ಚೂಕ್ ಅವರ ‘ದಿ ಹಿಮಾಲಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಲ್ಟರ್‌ನೇಟಿವ್ಸ್‌ (ಎಚ್‌ಐಎಎಲ್‌)’ ಶಿಕ್ಷಣ ಸಂಸ್ಥೆಯು ಅತ್ಯುತ್ತಮ ಕೆಲಸ ಮಾಡುತ್ತಿದೆ. ಆದ್ದರಿಂದ ಇದಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಾನ್ಯತೆ ನೀಡಬೇಕು’ ಎಂದು ಶಿಕ್ಷಣ, ಮಹಿಳೆ, ಯುವಕರು ಮತ್ತು ಕ್ರೀಡೆಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ. 

‘ವಾಂಗ್ಚೂಕ್ ಅವರು ಆರಂಭಿಸಿದ ಈ ಸಂಸ್ಥೆಗೆ ಯುಜಿಸಿ ಮಾನ್ಯತೆ ನೀಡುವ ಪ್ರಸ್ತಾವವು ಆಯೋಗದ ಮುಂದೆ ಬಹಳ ವರ್ಷಗಳಿಂದಲೂ ಇದೆ. ಆದರೂ ಮಾನ್ಯತೆ ನೀಡಲಾಗಿಲ್ಲ. ಇದು ಕಳವಳಕಾರಿ. ಯಾವ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಜಾರಿ ಮಾಡಲಾಗಿದೆಯೋ ಆ ಎಲ್ಲಾ ಕಾರ್ಯಗಳನ್ನು ಈ ಸಂಸ್ಥೆ ಮಾಡುತ್ತಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಕಾಂಗ್ರೆಸ್‌ ಸಂಸದ ದಿಗ್ವಿಜಯ ಸಿಂಗ್‌ ಅವರು ಈ ಸಂಸದೀಯ ಸ್ಥಾಯಿ ಸಮಿತಿಯ ಮುಖ್ಯಸ್ಥರು. ‘ಈ ಸಂಸ್ಥೆಯಲ್ಲಿನ ಶಿಕ್ಷಣ ಮಾದರಿಗಳನ್ನು ದೇಶದ ಬೇರೆಡೆಯೂ ಯಾವ ರೀತಿಯಲ್ಲಿ ಜಾರಿ ಮಾಡಬಹುದು ಎಂಬ ಬಗ್ಗೆ ಕೇಂದ್ರ ಶಿಕ್ಷಣ ಸಚಿವಾಲಯವು ಅಧ್ಯಯನ ನಡೆಸಬೇಕು’ ಎಂದು ಸಮಿತಿ ಸಲಹೆ ನೀಡಿದೆ.

ADVERTISEMENT

ಈ ಶಿಕ್ಷಣ ಸಂಸ್ಥೆಗೆ ಮಂಜೂರು ಮಾಡಲಾಗಿದ್ದ ಜಮೀನನ್ನು ಲಡಾಖ್‌ ಆಡಳಿತ ಹಿಂಪಡೆದಿದೆ. ಸಂಸ್ಥೆಗೆ ವಿದೇಶಿ ದೇಣಿಗೆ ಬರುವುದನ್ನು ಕೇಂದ್ರ ಗೃಹ ಸಚಿವಾಲಯ ತಡೆದಿದೆ. ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿತ್ತು. ಹಿಂಸೆಯನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿ ವಾಂಗ್ಚೂಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಇದೇ ಸೆಪ್ಟೆಂಬರ್‌ 26ರಂದು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.