ADVERTISEMENT

ಖಾಲಿದ್‌ಗಿಲ್ಲ ಜಾಮೀನು; ‘ಅನ್ಯಾಯ’ದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮನವಿ: ಸಿಬಲ್‌

ಪಿಟಿಐ
Published 5 ಸೆಪ್ಟೆಂಬರ್ 2025, 15:28 IST
Last Updated 5 ಸೆಪ್ಟೆಂಬರ್ 2025, 15:28 IST
ಕಪಿಲ್‌ ಸಿಬಲ್‌ 
ಕಪಿಲ್‌ ಸಿಬಲ್‌    

ನವದೆಹಲಿ: ಫೆಬ್ರುವರಿ 2020ರಲ್ಲಿ ನಡೆದ ದೆಹಲಿ ಗಲಭೆ ಪ್ರಕರಣದಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಉಮರ್‌ ಖಾಲಿದ್‌ಗೆ ದೆಹಲಿ ಹೈಕೋರ್ಟ್‌ ಮತ್ತೊಮ್ಮೆ ಜಾಮೀನು ನಿರಾಕರಿಸಿದ್ದು, ಈ ‘ಅನ್ಯಾಯ’ದ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆಹೋಗುವುದಾಗಿ ಹಿರಿಯ ವಕೀಲ ಕಪಿಲ್‌ ಸಿಬಲ್  ಹೇಳಿದ್ದಾರೆ. 

‘ಉಮರ್‌ ಖಾಲಿದ್‌ಗೆ ಜಾಮೀನು ನಿರಾಕರಿಸಿರುವುದು ಸಂವಿಧಾನದ 21ನೇ ವಿಧಿಯ (ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ) ಉಲ್ಲಂಘನೆಯಾಗಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು‘ ಎಂದು ಅವರು ಹೇಳಿದ್ದಾರೆ.  

‘ರಾಜಕೀಯ ಪಕ್ಷಗಳು ಇಂತಹ ವಿಷಯಗಳ ಕುರಿತು ಆಕ್ಷೇಪ ಎತ್ತದಿರುವುದು ದೇಶದ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ ಎನ್ನವುದನ್ನು ಬೊಟ್ಟು ಮಾಡುತ್ತದೆ. ಇದು ಅವರಿಗೆ ರಾಜಕೀಯವಾಗಿಯೂ ಹಾನಿ ಉಂಟುಮಾಡಬಹುದು’ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ಕಪಿಲ್ ಸಿಬಲ್‌ ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

ADVERTISEMENT

‘ನಾವು ಸರಿಯಾದ ಕೆಲಸವನ್ನು ಮಾಡಲು ಮತ್ತು ಅದಕ್ಕಾಗಿ ಧ್ವನಿ ಎತ್ತಲು ಬಯಸುವುದಿಲ್ಲ. ನಮ್ಮ ವಕೀಲರು, ಮಧ್ಯಮ ವರ್ಗ ಮತ್ತು ಸಮಾಜವು ಈ ವಿಷಯದಲ್ಲಿ ಮೌನಕ್ಕೆ ಜಾರಿದೆ’ ಎಂದು ಸಿಬಲ್‌ ಬೇಸರ ವ್ಯಕ್ತಪಡಿಸಿದರು. 

ಉಮರ್‌ ಖಾಲಿದ್‌ 4 ವರ್ಷ, 11 ತಿಂಗಳು ಮತ್ತು 15 ದಿನಗಳಿಂದ ಬಂಧನದಲ್ಲಿದ್ದಾರೆ.  ಖಾಲಿದ್, ಶಾರ್ಜೀಲ್‌ ಇಮಾಮ್ ಸೇರಿ ಒಂಬತ್ತು ಜನರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ತಿರಸ್ಕರಿಸಿತ್ತು. 

2022 ಮತ್ತು 2024ರಲ್ಲಿ ಖಾಲಿದ್‌ ಜಾಮೀನು ಕೋರಿ ಸಲ್ಲಿಸಲಾಗಿದ್ದ ಎರಡೂ ಮನವಿಗಳನ್ನು ಹೈಕೋರ್ಟ್‌ ತಿರಸ್ಕರಿಸಿದೆ. 2023ರಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲಾಗಿತ್ತು. ಅದನ್ನು 2024ರಲ್ಲಿ ವಾಪಸ್‌ ಪಡೆಯಲಾಗಿತ್ತು. ಹೈಕೋರ್ಟ್‌ ಮುಂದೆ ಮೊದಲ ಜಾಮೀನು ಮನವಿ ಬರುವ ಮುನ್ನ 28 ವಿಚಾರಣೆಗಳು ನಡೆದಿದ್ದವು. 2024ರಲ್ಲಿ ಸಲ್ಲಿಸಲಾಗಿದ್ದ ಮನವಿಯನ್ನು 407 ದಿನಗಳ ಬಳಿಕ ಕೋರ್ಟ್‌ ತಿರಸ್ಕರಿಸಿತು’ ಎಂದು ಸಿಬಲ್‌ ಹೇಳಿದ್ದಾರೆ. 

‘ನೇರ ಪುರಾವೆಗಳಿಲ್ಲ’

‘ವರ್ಷಗಳು ಉರುಳಿದರೂ ನ್ಯಾಯಾಲಯ ತೀರ್ಪು ನೀಡದಿದ್ದರೆ ಅದಕ್ಕಾಗಿ ವಕೀಲರನ್ನು ದೂಷಿಸಬೇಕೇ?’ ಎಂದಿರುವ ಸಿಬಲ್‌ ‘ಇದು ನ್ಯಾಯಾಲಯದ ಸ್ಥಿತಿ. ಕೋರ್ಟ್‌ ಜಾಮೀನು ನೀಡುವುದಿಲ್ಲ ಎನ್ನುವುದಾದರೆ ಖಾಲಿದ್‌ ಮನವಿಯನ್ನು ತಿರಸ್ಕರಿಸಲಿ. ಅದರ ಬದಲು ಯಾಕೆ 20–30 ಬಾರಿ ವಿಚಾರಣೆ ನಡೆಸಬೇಕು’ ಎಂದು ಪ್ರಶ್ನಿಸಿದ್ದಾರೆ.

ಖಾಲಿದ್ ವಿರುದ್ಧದ ಪ್ರಕರಣವು ಮುಂಬೈನಲ್ಲಿ ಅವರು ಮಾಡಿದ ಭಾಷಣಕ್ಕೆ ಸಂಬಂಧಿಸಿದ್ದಾಗಿದ್ದು ‘ಯುಎಪಿಎ’ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಅವರ ವಿರುದ್ಧ ಯಾವುದೇ ನೇರ ಪುರಾವೆಗಳಿಲ್ಲ’ ಎಂದು ಸಿಬಲ್‌ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.