ADVERTISEMENT

ಇರಾನ್‌ಗೆ ವಿಶ್ವಸಂಸ್ಥೆ ಅಣುಶಕ್ತಿವಿಭಾಗದ ಮುಖ್ಯಸ್ಥರ ಭೇಟಿ, ಚರ್ಚೆ

ಏಜೆನ್ಸೀಸ್
Published 21 ಫೆಬ್ರುವರಿ 2021, 12:13 IST
Last Updated 21 ಫೆಬ್ರುವರಿ 2021, 12:13 IST
ವಿಶ್ವಸಂಸ್ಥೆಯ ಲಾಂಛನ
ವಿಶ್ವಸಂಸ್ಥೆಯ ಲಾಂಛನ   

ಟೆಹ್ರಾನ್: ವಿಶ್ವಸಂಸ್ಥೆಯ ಅಣುಶಕ್ತಿ ಕಣ್ಗಾವಲು ವಿಭಾಗದ ಮುಖ್ಯಸ್ಥರು ಇರಾನ್‌ನ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದರು. ಅಣುಶಕ್ತಿ ಚಟುವಟಿಕೆಗಳ ಕಣ್ಗಾವಲಿಗೆ ಇರಿಸಿರುವ ಕ್ಯಾಮೆರಾಗಳ ಸಂಪರ್ಕ ಕಡಿತಗೊಳಿಸುವುದಾಗಿ ಟೆಹ್ರಾನ್ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಕಣ್ಗಾವಲು ಕಾರ್ಯಕ್ಕೆ ಧಕ್ಕೆಯಾಗದಂತೆ ಕ್ರಮವಹಿಸುವುದು ಈ ಭೇಟಿಯ ಉದ್ದೇಶವಾಗಿತ್ತು.

2015ರ ಅಣುಶಕ್ತಿ ಒಪ್ಪಂದಕ್ಕೆ ಬದ್ದರಾಗುವಂತೆ ಅಮೆರಿಕದ ಮೇಲೆ ಒತ್ತಡ ಹೆಚ್ಚಿಸುವುದು ಇರಾನ್‌ನ ಉದ್ದೇಶವಾಗಿದೆ. ಅಮೆರಿಕ ಈ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರವನ್ನು ಡೊನಾಲ್ಡ್‌ ಟ್ರಂಪ್ 2018ರಲ್ಲಿ ತೆಗೆದುಕೊಂಡಿದ್ದರು.

ವಿಶ್ವಸಂಸ್ಥೆ ಅಣುಶಕ್ತಿ ಕಣ್ಗಾವಲು ವಿಭಾಗದ ಮುಖ್ಯಸ್ಥ ರಫೇಲ್‌ ಗ್ರಾಸಿ ಅವರು ಇರಾನ್‌ನ ವಿದೇಶಾಂಗ ಸಚಿವ ಮೊಹಮ್ಮದ್‌ ಜವೇದ್ ಜರೀಫ್‌ ಅವರನ್ನು ಭೇಟಿಯಾಗಿದ್ದರು.

ADVERTISEMENT

ಈ ಕುರಿತು ಮಾತನಾಡಿದ ಜವೇದ್ ಜರೀಫ್ ಅವರು, ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾಗಿರುವ ಕಾರಣ ಗ್ರಾಸಿ ಅವರ ಭೇಟಿಯ ನಂತರ ಕಣ್ಗಾವಲು ಕ್ಯಾಮೆರಾಗಳ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಹೇಳಿದರು.

‘ಇದು, ವಿಶ್ವಕ್ಕೆ ನೀಡಿದ ಎಚ್ಚರಿಕೆಯೂ ಅಲ್ಲ, ಗಡುವು ಅಲ್ಲ’ ಎಂದು ಜರೀಫ್ ಅವರು ಸರ್ಕಾರಿ ಒಡೆತನದ ಪ್ರೆಸ್‌ ಟಿ.ವಿ.ಗೆ ತಿಳಿಸಿದರು. ‘ಇದು, ಸಂಸತ್ತು ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಆಂತರಿಕ ವಿಷಯವಾಗಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.