ADVERTISEMENT

60 ಲಕ್ಷಕ್ಕೂ ಅಧಿಕ ಮಂಜೂರಾದ ಸರ್ಕಾರಿ ಹುದ್ದೆಗಳು ಖಾಲಿ ಇವೆ: ವರುಣ್ ಗಾಂಧಿ

ಪಿಟಿಐ
Published 28 ಮೇ 2022, 18:34 IST
Last Updated 28 ಮೇ 2022, 18:34 IST
ಬಿಜೆಪಿಯ ಸಂಸದ ವರುಣ್ ಗಾಂಧಿ
ಬಿಜೆಪಿಯ ಸಂಸದ ವರುಣ್ ಗಾಂಧಿ   

ನವದೆಹಲಿ: ನಿರುದ್ಯೋಗ ವಿಷಯದಲ್ಲಿ ಕೇಂದ್ರದ ವಿರುದ್ಧ ಮತ್ತೆ ಧ್ವನಿ ಎತ್ತಿರುವಬಿಜೆಪಿಯ ಸಂಸದ ವರುಣ್ ಗಾಂಧಿ,ದೇಶದಲ್ಲಿ ಮೂರು ದಶಕಗಳಲ್ಲೇ ನಿರುದ್ಯೋಗ ಉತ್ತುಂಗದಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಮಂಜೂರಾದ 60 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ ಎಂದು ಹೇಳಿದ್ದಾರೆ.

ವಲಯವಾರು ಖಾಲಿ ಇರುವ ಹುದ್ದೆಗಳ ಪಟ್ಟಿಯನ್ನು ಅವರು ಟ್ವೀಟ್ ಮಾಡಿದ್ದಾರೆ.

‘ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಯದೆ ದೇಶದಾದ್ಯಂತ ಕೋಟ್ಯಂತರ ಯುವಕರು ಜುಗುಪ್ಸೆ ಮತ್ತು ಹತಾಶೆಗೆ ಒಳಗಾಗಿದ್ದಾರೆ. ಸರ್ಕಾರವೇ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ದೇಶದಾದ್ಯಂತ 60 ಲಕ್ಷಕ್ಕೂ ಅಧಿಕ ಮಂಜೂರಾದ ಹುದ್ದೆಗಳು ಖಾಲಿ ಇವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಮಂಜೂರಾದ ಈ ಹುದ್ದೆಗಳಿಗೆ ಹಂಚಿಕೆಯಾದ ಅನುದಾನ ಎಲ್ಲಿಗೆ ಹೋಯಿತು’ ಎಂದು ಪ್ರಶ್ನಿಸಿರುವ ಅವರು, ‘ಇದನ್ನು ತಿಳಿಯುವ ಹಕ್ಕು ದೇಶದ ಯುವಕರಿಗಿದೆ’ ಎಂದು ಹೇಳಿದ್ದಾರೆ.

ಈ ವಾರದ ಆರಂಭದಲ್ಲಿಯೂ ಅವರು ಖಾಲಿ ಇರುವ ಸರ್ಕಾರಿ ಹುದ್ದೆಗಳ ವಿಷಯ ಪ್ರಸ್ತಾಪಿಸಿದ್ದರು. ಆಡಳಿತಾತ್ಮಕ ಅಸಮರ್ಥತೆಗೆ ಯುವಕರು ಬೆಲೆ ತೆರುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದರು.

ತಮ್ಮದೇ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರನ್ನು ಪಿಲಿಬಿಟ್‌ ಕ್ಷೇತ್ರದ ಸಂಸದ ವರುಣ್‌ ಗಾಂಧಿ ಬಹಿರಂಗವಾಗಿ ಬೆಂಬಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.