ADVERTISEMENT

ಭಗವದ್ಗೀತೆ, ನಾಟ್ಯಶಾಸ್ತ್ರಕ್ಕೆ ಯುನೆಸ್ಕೊ ಮನ್ನಣೆ

ಪಿಟಿಐ
Published 18 ಏಪ್ರಿಲ್ 2025, 9:33 IST
Last Updated 18 ಏಪ್ರಿಲ್ 2025, 9:33 IST
ಯುನೆಸ್ಕೊ
ಯುನೆಸ್ಕೊ   

ನವದೆಹಲಿ: ಹಿಂದೂಗಳ ಧರ್ಮ ಗ್ರಂಥ ಭಗವದ್ಗೀತೆ ಮತ್ತು ಭರತಮುನಿಯ ನಾಟ್ಯಶಾಸ್ತ್ರಕ್ಕೆ ಯುನೆಸ್ಕೊ ಮನ್ನಣೆ ದೊರಕಿದೆ.

ಯುನೆಸ್ಕೊ ಮೆಮೊರಿ ಆಫ್‌ ದಿ ವರ್ಲ್ಡ್‌ ರಿಜಿಸ್ಟರ್‌(ಯುನೆಸ್ಕೊ ವಿಶ್ವ ಸ್ಮೃತಿ ದಾಖಲೆ)ನಲ್ಲಿ ಭಗವದ್ಗೀತೆ ಮತ್ತು ನಾಟ್ಯಶಾಸ್ತ್ರ ಸೇರಿ ಇನ್ನೂ 74 ಹೊಸ ಸಂಗ್ರಹ ಸಾಕ್ಷ್ಯಗಳನ್ನು ದಾಖಲು ಮಾಡಲಾಗಿದೆ. ವೈಜ್ಞಾನಿಕ ಕ್ರಾಂತಿ, ಇತಿಹಾಸ ಹಾಗೂ ಬಹುಪಕ್ಷೀಯ ವಿಷಯಗಳಿಗೆ ಸಂಬಂಧಿಸಿ 72 ದೇಶಗಳ ಮಹಿಳೆಯರ ಕೊಡುಗೆ, ನಾಲ್ಕು ಅಂತರರಾಷ್ಟ್ರೀಯ ಸಂಘಟನೆಗಳ ಕುರಿತ ವಿವರಗಳು ಕೂಡ ಈ ನೋಂದಣಿಯ ಭಾಗವಾಗಿವೆ ಎಂದು ಯುನೆಸ್ಕೊ ತಿಳಿಸಿದೆ.

ಪುಸ್ತಕ, ಹಸ್ತಪ್ರತಿ, ನಕ್ಷೆ, ಛಾಯಾಚಿತ್ರಗಳು, ಧ್ವನಿಮುದ್ರಣ, ವಿಡಿಯೊಗಳ ಮಾದರಿಗಳಲ್ಲಿ ದಾಖಲು ಮಾಡಲಾಗಿದೆ ಎಂದು ಯುನೆಸ್ಕೊ ಹೇಳಿದೆ.

ADVERTISEMENT

ಏ.18ರಂದು ವಿಶ್ವ ಪಾರಂಪರಿಕ ದಿನದ ಅಂಗವಾಗಿ ಈ ಘೋಷಣೆ ಮಾಡಲಾಗಿದೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂತಸ ಹಂಚಿಕೊಂಡು, ‘ಜಗತ್ತಿನಾದ್ಯಂತ ಇರುವ ಎಲ್ಲಾ ಭಾರತಿಯರಿಗೂ ಇದು ಹೆಮ್ಮೆಯ ಕ್ಷಣವಾಗಿದೆ. ಭಗವದ್ಗೀತೆ ಮತ್ತು ನಾಟ್ಯಶಾಸ್ತ್ರವು ಶತಮಾನಗಳಿಂದ ನಾಗರಿಕತೆಯನ್ನು ಪೋಷಿಸಿವೆ. ಮುಂದಿನ ದಿನಗಳಲ್ಲಿ ಜಗತ್ತಿಗೆ ಇನ್ನಷ್ಟು ಸ್ಪೂರ್ತಿ ನೀಡಲಿವೆ’ ಎಂದು ಬರೆದುಕೊಂಡಿದ್ದಾರೆ.

‘ಕ್ರಿಸ್ತಪೂರ್ವ 2ನೇ ಶತಮಾನದ, ಭರತ ಮುನಿ ರಚಿತ ನಾಟ್ಯಶಾಸ್ತ್ರವನ್ನು ಪುಣೆಯ ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಇನ್ಸ್‌ಟಿಟ್ಯೂಟ್‌ನಲ್ಲಿ ಸಂರಕ್ಷಿಸಿಡಲಾಗಿದೆ. ‍ಪ್ರದರ್ಶಕ ಕಲೆ ಕುರಿತ ಈ ಗ್ರಂಥವು 36 ಸಾವಿರ ಪದ್ಯಗಳನ್ನು ಒಳಗೊಂಡಿದ್ದು, ಗಂಧರ್ವವೇದ ಎಂದೇ ಖ್ಯಾತಿ ಹೊಂದಿದೆ’ ಯುನೆಸ್ಕೊ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.