ADVERTISEMENT

ಮುರಿದ ಸೀಟಿನಲ್ಲಿ ಪ್ರಯಾಣಿಸಿದ ಸಚಿವ ಚೌಹಾಣ್: ಕ್ಷಮೆಯಾಚಿಸಿದ 'ಏರ್‌ ಇಂಡಿಯಾ'

ಪಿಟಿಐ
Published 22 ಫೆಬ್ರುವರಿ 2025, 9:30 IST
Last Updated 22 ಫೆಬ್ರುವರಿ 2025, 9:30 IST
<div class="paragraphs"><p> ಶಿವರಾಜ್ ಸಿಂಗ್ ಚೌಹಾಣ್ (ಸಂಗ್ರಹ ಚಿತ್ರ )</p></div>

ಶಿವರಾಜ್ ಸಿಂಗ್ ಚೌಹಾಣ್ (ಸಂಗ್ರಹ ಚಿತ್ರ )

   

ಭೋಪಾಲ್: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಾವು ಪ್ರಯಾಣಿಸಿದ ಏರ್ ಇಂಡಿಯಾ ವಿಮಾನದಲ್ಲಿ ಎದುರಾದ ಅನಾನುಕೂಲತೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, 'ನಾನು ಕೆಲಸ ನಿಮಿತ್ತ ಏರ್‌ ಇಂಡಿಯಾ ವಿಮಾನ AI436ರಲ್ಲಿ ಭೋಪಾಲ್‌ನಿಂದ ದೆಹಲಿಗೆ ಹೊರಟಿದ್ದೆ. ಈ ವೇಳೆ ನನಗೆ ನಿಗದಿಯಾಗಿದ್ದ ಸೀಟ್‌ ನಂಬರ್ 8cರಲ್ಲಿ ಕುಳಿತುಕೊಳ್ಳಲು ಹೋದಾಗ, ಆ ಸೀಟು ಮುರಿದ ಸ್ಥಿತಿಯಲ್ಲಿ ಕಂಡುಬಂತು. ಆದರೆ ಆ ವಿಮಾನದ ಕೆಲವು ಸೀಟುಗಳು ಹಾಗೆಯೇ ಇತ್ತು. ಪ್ರಯಾಣಿಕರಿಂದ ಪೂರ್ಣ ಪ್ರಮಾಣದ ಟಿಕೆಟ್‌ ಹಣವನ್ನು ‍ಪಡೆದು, ಈ ರೀತಿಯ ಸೇವೆ ಒದಗಿಸುವುದು ಅನೈತಿಕ ಪದ್ಧತಿ' ಎಂದು ಆಕ್ರೋಶ ಹೊರಹಾಕಿದ್ದಾರೆ.

ADVERTISEMENT

'ನನ್ನ ಸೀಟು ಅನ್ನು ಬದಲಾಯಿಸಿಕೊಳ್ಳುವಂತೆ ಸಿಬ್ಬಂದಿ ಹೇಳಿದರು. ಆದರೆ ಇತರೆ ಪ್ರಯಾಣಿಕರಿಗೆ ನನ್ನಿಂದ ಅನಾನುಕೂಲ ಉಂಟಾಗುವುದು ಸರಿಯಲ್ಲ ಎಂದು ಭಾವಿಸಿ, ನಾನು ಮುರಿದ ಸೀಟಿನಲ್ಲೇ ಪ್ರಯಾಣಿಸಿದೆ ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

'ಭವಿಷ್ಯದಲ್ಲಿ ಯಾವುದೇ ಪ್ರಯಾಣಿಕರಿಗೆ ಇಂತಹ ಅನಾನುಕೂಲತೆಯ ಪ್ರಯಾಣವನ್ನು ಒದಗಿಸದಂತೆ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಕ್ರಮಕೈಗೊಳ್ಳತ್ತದೆಯೇ ಅಥವಾ ಪ್ರಯಾಣಿಕರ ತುರ್ತು ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ಇಂತಹ ಸೇವೆಗಳನ್ನೇ ಒದಗಿಸುತ್ತದೆಯೇ' ಎಂದು ಪ್ರಶ್ನಿಸಿದ್ದಾರೆ.

ಚೌಹಾಣ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ, 'ಸರ್‌, ನಿಮಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ಭವಿಷ್ಯದಲ್ಲಿ ಇಂತಹ ಯಾವುದೇ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸುತ್ತೇವೆ' ಎಂದು ಎಕ್ಸ್‌ನಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.