ಭೋಪಾಲ್‌ನ ಯೂನಿಯನ್ ಕಾರ್ಬೈಡ್‌ನ 337 ಟನ್ ವಿಷಕಾರಿ ತ್ಯಾಜ್ಯವನ್ನು ಹೊತ್ತುತಂದ ಟ್ರಕ್‌ಗಳು ಬುಧವಾರ ರಾತ್ರಿ ಕೈಗಾರಿಕಾ ನಗರ ಪೀಥಾಂಪುರ ಪಟ್ಟಣ ತಲುಪಿದವು
–ಪಿಟಿಐ ಚಿತ್ರ
ಧರ್, ಮಧ್ಯಪ್ರದೇಶ: ಯೂನಿಯನ್ ಕಾರ್ಬೈಡ್‌ನ 337 ಟನ್ ವಿಷಕಾರಿ ತ್ಯಾಜ್ಯವನ್ನು ಕೈಗಾರಿಕಾ ನಗರ ಪೀಥಾಂಪುರದಲ್ಲಿ ವಿಲೇವಾರಿ ಮಾಡುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಪಟ್ಟಣದಲ್ಲಿ ಶುಕ್ರವಾರ ನಡೆದ ಪ್ರತಿಭಟನೆ ವೇಳೆ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದರು.
ತ್ಯಾಜ್ಯ ವಿಲೇವಾರಿ ವಿರೋಧಿಸಿ ಪೀಥಾಂಪುರದಲ್ಲಿ ಶುಕ್ರವಾರ ಬಂದ್ ಘೋಷಿಸಲಾಗಿತ್ತು. ಈ ವೇಳೆ ಇಬ್ಬರು ಮೈ ಮೇಲೆ ದ್ರವ ಪದಾರ್ಥವನ್ನು ಸುರಿದುಕೊಂಡು ಬೆಂಕಿ ಹಚ್ಚಿಕೊಂಡರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು. 40 ವರ್ಷದ ಇಬ್ಬರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಬಿಗುವಿನಿಂದ ಕೂಡಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಸಿಂಗ್ ತಿಳಿಸಿದ್ದಾರೆ.
ಪಟ್ಟಣದ ಇತರೆ ಪ್ರದೇಶಗಳಲ್ಲಿ ಪ್ರತಿಭಟನೆಗಳು ಮುಂದುವರಿದಿವೆ.
ಪೀಥಾಂಪುರ ಕೈಗಾರಿಕಾ ಪಟ್ಟಣವು ಇಂದೋರ್‌ನಿಂದ 30 ಕಿ.ಮೀ ದೂರದಲ್ಲಿದೆ. ತ್ಯಾಜ್ಯ ವಿಲೇವಾರಿಯಿಂದ ಸ್ಥಳೀಯ ಜನರು ಹಾಗೂ ಪರಿಸರದ ಮೇಲೆ ತೀವ್ರ ಹಾನಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿ, ‘ಪೀಥಾಂಪುರ ಬಚಾವೊ ಸಮಿತಿ’ ಶುಕ್ರವಾರ ಬಂದ್‌ಗೆ ಕರೆ ನೀಡಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಪಟ್ಟಣದಲ್ಲಿ 1.75 ಲಕ್ಷ ನಾಗರಿಕರು ವಾಸಿಸುತ್ತಿದ್ದು, ಮೂರು ವಲಯಗಳಲ್ಲಿ 700 ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ.
ಉಪವಾಸ ಸತ್ಯಾಗ್ರಹ: ಮತ್ತೊಂದೆಡೆ ಸ್ಥಳೀಯ ನಿವಾಸಿ ಸಂದೀಪ್ ರಘುವಂಶಿ ಅವರು ಗುರುವಾರದಿಂದಲೇ ಇಲ್ಲಿನ ಬಸ್‌ನಿಲ್ದಾಣದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ನೂರಾರು ಜನರು ಅವರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇಡೀ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ದುರಂತ ಸಂಭವಿಸಿ 40 ವರ್ಷ ಕಳೆದಿದ್ದರೂ, ಭೋಪಾಲ್‌ನ ತ್ಯಾಜ್ಯವನ್ನು ವಿಲೇವಾರಿ ಮಾಡದ್ದಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದೆ. ಈ ಕುರಿತು ಸುಪ್ರೀಂಕೋರ್ಟ್, ಸೂಚನೆ ನೀಡಿದ್ದರೂ, ರಾಜ್ಯ ಸರ್ಕಾರವು ಜಡತ್ವ ಸ್ಥಿತಿಯಲ್ಲಿದೆ. ನ್ಯಾಯಾಲಯ ನೀಡಿದ ಸೂಚನೆ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು.
ತ್ಯಾಜ್ಯ ವಿಲೇವಾರಿ ವಿಚಾರ ರಾಜಕೀಯಕರಣಗೊಳಿಸಬೇಡಿ. ತ್ಯಾಜ್ಯದಲ್ಲಿ ಶೇ 60ರಷ್ಟು ಮಣ್ಣಿದ್ದು ಶೇ 40ರಷ್ಟು ನಾಫ್ತಾಲ್ ಇದೆ. ಇದೆಲ್ಲವೂ ಹಾನಿಕಾರಕವಲ್ಲಮೋಹನ್ ಯಾದವ್ ಮುಖ್ಯಮಂತ್ರಿ ಮಧ್ಯಪ್ರದೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.