ADVERTISEMENT

ಅಲೋಪತಿ ಕುರಿತ ಹೇಳಿಕೆಯನ್ನು ರಾಮದೇವ್‌ ಹಿಂಪಡೆಯಲಿ: ಸಚಿವ ಹರ್ಷವರ್ಧನ್‌

ಪಿಟಿಐ
Published 23 ಮೇ 2021, 14:42 IST
Last Updated 23 ಮೇ 2021, 14:42 IST
ಸಮಾರಂಭವೊಂದರಲ್ಲಿ ಕೇಂದ್ರ ಗೃಹ ಸಚಿವ ಹರ್ಷವರ್ಧನ್‌ ಅವರೊಂದಿಗೆ ಬಾಬಾ ರಾಮದೇವ್‌ (ಪಿಟಿಐ)
ಸಮಾರಂಭವೊಂದರಲ್ಲಿ ಕೇಂದ್ರ ಗೃಹ ಸಚಿವ ಹರ್ಷವರ್ಧನ್‌ ಅವರೊಂದಿಗೆ ಬಾಬಾ ರಾಮದೇವ್‌ (ಪಿಟಿಐ)   

ನವದೆಹಲಿ: ಅಲೋಪತಿ ಔಷಧ ಪದ್ಧತಿಯ ಕುರಿತ ಯೋಗ ಗುರು ಬಾಬಾ ರಾಮದೇವ್ ಅವರ ಹೇಳಿಕೆ 'ಅತ್ಯಂತ ದುರದೃಷ್ಟಕರ' ಎಂದು ಕೇಂದ್ರ ಆರೋಗ್ಯ ಸಚಿವ, ಅಲೋಪಥಿ ವೈದ್ಯರೂ ಆದ ಹರ್ಷವರ್ಧನ್ ಹೇಳಿದ್ದಾರೆ. ಅಲ್ಲದೆ, ಬಾಬಾ ರಾಮದೇವ್‌ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಅಲೋಪತಿ ವೈದ್ಯ ಪದ್ಧತಿಯನ್ನು ಅಪಮಾನಿಸುವ ಮಾತುಗಳುಳ್ಳ ಬಾಬಾ ರಾಮದೇವ್‌ ಅವರ ವಿಡಿಯೊವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಈ ವಿಚಾರವಾಗಿ ಆಕ್ರೋಶಗೊಂಡಿದ್ದ ಭಾರತೀಯ ವೈದ್ಯಕೀಯ ಸಂಘ (ಐಎಂಎ), 'ಅಲೋಪತಿ ವೈದ್ಯಕೀಯ ಪದ್ಧತಿಯ ವಿರುದ್ಧ ಅಸಂಬಂದ್ಧ ಹೇಳಿಕೆ ನೀಡಿರುವ ಬಾಬಾ ರಾಮದೇವ್‌ ಅವರು ವೈಜ್ಞಾನಿಕ ವೈದ್ಯ ಪದ್ಧತಿಯ ಹೆಸರಿಗೆ ಚ್ಯುತಿ ತರಲು ಯತ್ನಿಸಿದ್ದಾರೆ. ಅಸಂಬದ್ಧ ಹೇಳಿಕೆಗಳ ಮೂಲಕ ದೇಶದ ವಿದ್ಯಾವಂತ ಸಮಾಜದ ದಿಕ್ಕು ತಪ್ಪಿಸುತ್ತಿರುವ ರಾಮ್‌ದೇವ್ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆಯಡಿ ವಿಚಾರಣೆ ನಡೆಸಬೇಕು,' ಎಂದು ಆಗ್ರಹಿಸಿತ್ತು.

ವಿವಾದದ ಹಿನ್ನೆಲೆಯಲ್ಲಿ ರಾಮದೇವ್ ಅವರಿಗೆ ಪತ್ರ ಬರೆದಿರುವ ಅರೋಗ್ಯ ಸಚಿವ ಹರ್ಷವರ್ಧನ್ 'ನಿಮ್ಮ ಹೇಳಿಕೆಯು ಕೊರೊನಾ ವಾರಿಯರ್‌ಗಳನ್ನು ಅಪಮಾನಿಸುತ್ತಿದೆ. ದೇಶದ ಜನರ ಭಾವನೆಗಳನ್ನು ಘಾಸಿಗೊಳಿಸುತ್ತಿದೆ. ಅಲೋಪತಿ ಕುರಿತ ನಿಮ್ಮ ಹೇಳಿಕೆಯು ಆರೋಗ್ಯ ಕಾರ್ಯಕರ್ತರ ಆತ್ಮಸ್ಥೈರ್ಯಕ್ಕೆ ಧಕ್ಕೆ ತರುತ್ತಿದೆ. ಕೋವಿಡ್‌ ವಿರುದ್ಧದ ನಮ್ಮ ಹೋರಾಟವನ್ನು ದುರ್ಬಲಗೊಳಿಸುತ್ತಿದೆ,' ಎಂದಿದ್ದಾರೆ.

ADVERTISEMENT

ಅಲ್ಲದೆ, ಅಲೋಪತಿ ಕುರಿತ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ರಾಮದೇವ್‌ಗೆ ಸಚಿವರು ಆಗ್ರಹಿಸಿದ್ದಾರೆ.

'ಅಲೋಪತಿ ಔಷಧಿಗಳು ಕೋಟ್ಯಂತರ ಜೀವಗಳನ್ನು ಉಳಿಸಿವೆ. ಲಕ್ಷಾಂತರ ಸಾವಿಗೆ ಅಲೋಪಥಿ ಕಾರಣವೆಂಬ ರಾಮದೇವ್‌ ಅವರ ಹೇಳಿಕೆ ಅತ್ಯಂತ ದುರದೃಷ್ಟಕರ ಸಂಗತಿ,' ಎಂದೂ ಹರ್ಷವರ್ಧನ್‌ ಹೇಳಿದ್ದಾರೆ.

ಏನು ಹೇಳಿದ್ದರು ಬಾಬಾ ರಾಮದೇವ್‌?

‘ಅಲೋಪತಿ ಒಂದು ಅವಿವೇಕದ ವಿಜ್ಞಾನ’ ಎಂಬುದಾಗಿ ರಾಮ್‌ದೇವ್ ಹೇಳಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಅಲೋಪತಿ ಔಷಧಿಗಳನ್ನು ತೆಗೆದುಕೊಂಡ ನಂತರ ಲಕ್ಷಾಂತರ ಜನರು ಮೃತಪಟ್ಟಿದ್ದಾರೆ. ಭಾರತದ ಔಷಧ ನಿಯಂತ್ರಕರು ಅನುಮೋದಿಸಿದ್ದ ರೆಮ್‌ಡಿಸಿವಿರ್, ಫಾವಿಫ್ಲು ಮತ್ತು ಇತರ ಎಲ್ಲಾ ಔಷಧಿಗಳು ಚಿಕಿತ್ಸೆಯಲ್ಲಿ ವಿಫಲವಾಗಿದೆ’ ಎಂದು ವಿಡಿಯೊದಲ್ಲಿ ರಾಮದೇವ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.