ADVERTISEMENT

ಕಾಂಗ್ರೆಸ್‌ನ ಹಠಾತ್‌ ಕಣ್ಮರೆ ಬಿಜೆಪಿ ಸೋಲಿಗೆ ಕಾರಣ: ಪ್ರಕಾಶ್‌ ಜಾವಡೇಕರ್‌

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 11:24 IST
Last Updated 14 ಫೆಬ್ರುವರಿ 2020, 11:24 IST
ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌
ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌    

ಪುಣೆ: ದೆಹಲಿಯಿಂದ ಕಾಂಗ್ರೆಸ್‌ ಪಕ್ಷವು ಹಠಾತ್ತಾಗಿ ಕಣ್ಮರೆಯಾಗಿದ್ದರಿಂದಲೇ ಬಿಜೆಪಿಗೆ ಸೋಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಹೇಳಿದ್ದಾರೆ.

ದೆಹಲಿ ವಿಧಾನಸಭೆಯ 70 ಸ್ಥಾನಗಳ ಪೈಕಿ 62 ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ ಆಮ್‌ ಆದ್ಮಿ ಪಕ್ಷವು ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಬಿಜೆಪಿ ಕೇವಲ 8 ಸ್ಥಾನಗಳಲ್ಲಿ ಗೆದ್ದರೆ, ಕಾಂಗ್ರೆಸ್‌ ಪಕ್ಷ ಶೂನ್ಯ ಸಂಪಾದನೆ ಮಾಡಿತ್ತು.

ಈ ಫಲಿತಾಂಶವು ರಾಷ್ಟ್ರ ರಾಜಕಾರಣದಲ್ಲಿ ಗಂಭೀರ ಸ್ವರೂಪದ ಚರ್ಚೆಗಳಿಗೆ ಕಾರಣವಾಗಿರುವ ಸಂದರ್ಭದಲ್ಲಿ ಕೇಂದ್ರ ಸಚಿವ ಜಾವಡೇಕರ್‌ ಅವರು ತಮ್ಮದೇ ಆದ ಅಭಿಪ್ರಾಯ ಹೊರಹಾಕಿದ್ದಾರೆ.

ADVERTISEMENT

ಶುಕ್ರವಾರ ಪುಣೆಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ದೆಹಲಿಯಿಂದ ಕಾಂಗ್ರೆಸ್‌ನ ಹಠಾತ್‌ ಕಣ್ಮರೆಯೇ ಬಿಜೆಪಿ ಸೋಲಿಗೆ ಕಾರಣ. ಕಾಂಗ್ರೆಸ್‌ ತಾನಾಗಿಯೇ ಕಣ್ಮರೆ ಆಯಿತಾ, ಜನರು ಕಣ್ಮರೆ ಆಗುವಂತೆ ಮಾಡಿದರಾ ಅಥವಾ ಅವರ ಮತಗಳು ಎಎಪಿಗೆ ವರ್ಗಾವಣೆಗೊಂಡವಾ ಎಂಬುದು ಗೊತ್ತಿಲ್ಲ’ ಎಂದು ಜಾವಡೇಕರ್‌ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಶೇ. 26 ಮತಗಳನ್ನು ಗಳಿಸಿದ್ದ ಕಾಂಗ್ರೆಸ್‌ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಶೇ.4 ಮತಗಳನ್ನು ಗಳಿಸಿದೆ. ಈ ಚುನಾವಣಾ ಫಲಿತಾಂಶದ ಬಗ್ಗೆ ಮುಂದಿನ ದಿನಗಳಲ್ಲಿ ಪರಾಮರ್ಶೆ ನಡೆಸಲಾಗುವುದು ಎಂದು ಜಾವಡೇಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.