ತಿರುಮಲ ತಿರುಪತಿ ದೇವಸ್ಥಾನ
ತಿರುಪತಿ: ಭಗವಂತ ವೆಂಕಟೇಶ್ವರನಲ್ಲಿ ನಂಬಿಕೆ ಇಲ್ಲದಿದ್ದರೂ, ಸನಾತನ ಧರ್ಮವನ್ನು ಪಾಲಿಸದಿದ್ದರೂ ಸುಮಾರು 1,000 ಮಂದಿ ಹಿಂದೂಯೇತರರು ತಿರುಮಲ ತಿರುಪತಿ ದೇವಸ್ಥಾನಮ್ಸ್‌ನಲ್ಲಿ (ಟಿಟಿಡಿ) ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಖಾತೆ ಸಚಿವ ಬಂಡಿ ಸಂಜಯ್ ಕುಮಾರ್ ಶುಕ್ರವಾರ ಆರೋಪಿಸಿದ್ದಾರೆ.
ಹಿಂದೆಯೇ ಹಿಂದೂಯೇತರರನ್ನು ನೇಮಿಸಿಕೊಂಡಿದ್ದರೂ, ಬದಲಾವಣೆ ಮಾಡಿಲ್ಲವೇಕೆ ಎಂದು ಪ್ರಶ್ನಿಸಿರುವ ಸಂಜಯ್, 'ಟಿಟಿಡಿಯಲ್ಲಿ ಸಾಕಷ್ಟು ಆಂತರಿಕ ಸಮಸ್ಯೆಗಳು ಇರಬಹುದು. ಆದರೆ, ಈ (ಹಿಂದೂಯೇತರರ ನೇಮಕ) ವಿಚಾರದ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು' ಎಂದು ಒತ್ತಾಯಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಹಿಂದೂಯೇತರರು ದೇವರ ಬಗ್ಗೆ ತಾವು ಹೊಂದಿರುವ ನಂಬಿಕೆಯನ್ನು ಘೋಷಿಸಬೇಕು. ಆದರೆ, ದೇವರದಲ್ಲಿ ನಂಬಿಕೆಯಿಲ್ಲದ ಸರಿಸುಮಾರು ಸಾವಿರ ಮಂದಿ ಹಿಂದೂಯೇತರ ಸಿಬ್ಬಂದಿ ಟಿಟಿಡಿ ಉದ್ಯೋಗದಲ್ಲಿ ಮುಂದುವರಿಯುತ್ತಿರುವುದು ಹೇಗೆ?' ಎಂದು ಕೇಳಿದ್ದಾರೆ.
ಟಿಟಿಡಿ ನೌಕರನಾಗಿದ್ದರೂ ನಿಯಮಿತವಾಗಿ ಚರ್ಚ್‌ಗೆ ಭೇಟಿ ನೀಡುತ್ತಿದ್ದ ಒಬ್ಬ ಕೆಲಸಗಾರರನ್ನು ಇತ್ತೀಚೆಗೆ ಅಮಾನತು ಮಾಡಿದ ವಿಚಾರವನ್ನು ಸಚಿವ ಇದೇ ವೇಳೆ ಸ್ಮರಿಸಿದ್ದಾರೆ.
'ಮಂಡಳಿಯಲ್ಲಿ ಎಷ್ಟು ಮಂದಿ ಹಿಂದೂಯೇತರರು ಕೆಲಸ ಮಾಡುತ್ತಿದ್ದಾರೆ ಹಾಗೂ ಹಿಂದೂ ಭಕ್ತರಲ್ಲಿ ಗಂಭೀರ ಕಳವಳಗಳಿದ್ದರೂ ಈವರೆಗೆ ವಿಚಾರಣೆಯಾಗಿಲ್ಲವೇಕೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು' ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.