
ಕುಲದೀಪ್ ಸೆಂಗರ್
ನವದೆಹಲಿ: ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್ ಅನುಭವಿಸುತ್ತಿರುವ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ಅಮಾನತುಗೊಳಿಸಿದೆ.
‘ಸಂತ್ರಸ್ತೆಯ ನಿವಾಸದ 5 ಕಿ.ಮೀ. ವ್ಯಾಪ್ತಿಯೊಳಗೆ ಸೆಂಗರ್ ಪ್ರವೇಶಿಸಬಾರದು ಮತ್ತು ಸಂತ್ರಸ್ತೆ ಮತ್ತು ಅವರ ತಾಯಿಗೆ ಬೆದರಿಕೆ ಒಡ್ಡಬಾರದು’ ಎಂದು ನ್ಯಾಯಮೂರ್ತಿಗಳಾದ ಸುಬ್ರಮಣಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರ ಪೀಠ ಷರತ್ತು ವಿಧಿಸಿ ಜಾಮೀನು ನೀಡಿದೆ.
2019 ಡಿಸೆಂಬರ್‌ನಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸೆಂಗರ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಶಿಕ್ಷೆ ಅಮಾನತಿನಲ್ಲಿರಲಿದೆ.
ಸುಪ್ರೀಂ ಆದೇಶದನ್ವಯ ರೋಸ್ಟರ್ ಪೀಠದಲ್ಲಿ ಜನವರಿ 16ರಂದು ಸೆಂಗರ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಿಗದಿಪಡಿಸಿದೆ.
ಸೆಂಗರ್ 2017ರಲ್ಲಿ ಬಾಲಕಿಯೊಬ್ಬರನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದ. ಅತ್ಯಾಚಾರ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ಇತರ ಪ್ರಕರಣಗಳನ್ನು ಉತ್ತರಪ್ರದೇಶ ವಿಚಾರಣಾ ನ್ಯಾಯಾಲಯದಿಂದ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ 2019ರಲ್ಲಿ ಆದೇಶಿಸಿತ್ತು.
ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ಸೆಂಗರ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.