
ಹೈಕೋರ್ಟ್ ಆದೇಶ ಖಂಡಿಸಿ ದೆಹಲಿಯ ಇಂಡಿಯಾ ಗೇಟ್ ಬಳಿ ಸಂತ್ರಸ್ತೆ, ಆಕೆಯ ತಾಯಿ ಪ್ರತಿಭಟನೆ ನಡೆಸಿದರು.
ನವದೆಹಲಿ: ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್ ಅನುಭವಿಸುತ್ತಿರುವ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತುಗೊಳಿಸಿರುವುದಕ್ಕೆ ಸಂತ್ರಸ್ತೆ ಕುಟುಂಬಸ್ಥರು ತೀವ್ರ ಬೇಸರ ಹೊರಹಾಕಿದ್ದಾರೆ.
ಹೈಕೋರ್ಟ್ ಆದೇಶವನ್ನು ಖಂಡಿಸಿ ದೆಹಲಿಯ ಇಂಡಿಯಾ ಗೇಟ್ ಬಳಿ ಸಂತ್ರಸ್ತೆ, ಆಕೆಯ ತಾಯಿ ಸೇರಿದಂತೆ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯೋಗಿತಾ ಭಯನಾ ಅವರು ಪ್ರತಿಭಟನೆ ನಡೆಸಿದ್ದಾರೆ.
‘ನಮಗೆ ನ್ಯಾಯ ಸಿಗಲಿಲ್ಲ... ನ್ಯಾಯ ದೊರಕಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿ ನನ್ನ ಮಗಳನ್ನು ಸೆರೆಯಾಳುಗಳಾಗಿ ಸಿಆರ್‌ಪಿಎಫ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಅವರು (ಭದ್ರತಾ ಸಿಬ್ಬಂದಿ) ನಮ್ಮೆಲ್ಲರನ್ನೂ ಕೊಲ್ಲಲು ಬಯಸುತ್ತಾರೆ. ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್ ಸಿಂಗ್ ಸೆಂಗರ್ ಅವರ ಜಾಮೀನು ಕೂಡಲೇ ರದ್ದುಗೊಳಿಸಬೇಕು’ ಎಂದು ಸಂತ್ರಸ್ತೆ ತಾಯಿ ಒತ್ತಾಯಿಸಿದ್ದಾರೆ.
‘ಪ್ರಕರಣದ ಆರೋಪಿಗಳು ಜೈಲಿನಿಂದ ಹೊರಬಂದಿರುವುದರಿಂದ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆಗಳು ಬರುತ್ತಿವೆ. ಯಾವುದೇ ಸಂದರ್ಭದಲ್ಲೂ ಅವರು ನಮ್ಮನ್ನು ಕೊಲೆ ಮಾಡಬಹುದು. ನಾವು ಸುರಕ್ಷಿತವಾಗಿಲ್ಲದ ಕಾರಣಕ್ಕೆ ಸೆಂಗರ್ ಅವರ ಜಾಮೀನು ಅನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲದಿದ್ದರೆ, ನಾವು ಪ್ರಾಣವನ್ನೇ ತ್ಯಾಗ ಮಾಡುತ್ತೇವೆ’ ಎಂದು ಸಂತ್ರಸ್ತೆ ತಾಯಿ ಅಳಲು ತೋಡಿಕೊಂಡಿದ್ದಾರೆ.
‘ಇದು ನ್ಯಾಯವೇ?, ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿಯನ್ನು ಬೀದಿಯಲ್ಲಿ ಏಂಕಾಂಕಿಯಾಗಿ ಬಿಟ್ಟುಹೋಗಿದ್ದಾರೆ. ಭದ್ರತಾ ಸಿಬ್ಬಂದಿ ಸಂತ್ರಸ್ತೆಯನ್ನು ಸಿಆರ್‌ಪಿಎಫ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಆಕೆ ಅಳುತ್ತಾ ನಮ್ಮನ್ನು ಕರೆಯುತ್ತಿದ್ದಾಳೆ. ಇದು ದೇಶವೊ ಅಥವಾ ಅಲ್ಲವೂ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯೋಗಿತಾ ಭಯನಾ ಹೇಳಿದ್ದಾರೆ.
ಸಂತ್ರಸ್ತೆ ಸಹೋದರಿ ಹೇಳಿದ್ದೇನು?
‘ದೆಹಲಿ ಹೈಕೋರ್ಟ್ ತೀರ್ಪು ನಮ್ಮ ಕುಟುಂಬಕ್ಕೆ ಸಮಾಧಾನ ತರಿಸಿಲ್ಲ. ಪ್ರಕರಣದ ಅಪರಾಧಿ ಕುಲದೀಪ್ ಸಿಂಗ್ ಸೆಂಗರ್ ಅವರು ನಮ್ಮ ತಂದೆ, ಚಿಕ್ಕಪ್ಪ ಅವರನ್ನು ಕೊಲೆ ಮಾಡಿಸಿದ್ದಾರೆ. ಇದೀಗ ಅವರು ಜೈಲಿನಿಂದ ಬಿಡುಗಡೆಯಾಗಿರುವುದು ನಮಗೆ ಆತಂಕ ಮೂಡಿಸಿದೆ’ ಎಂದು ಸಂತ್ರಸ್ತೆ ಸಹೋದರಿ ಅಳಲು ತೋಡಿಕೊಂಡಿದ್ದಾರೆ.
ಅಪರಾಧಿಗಳು ಹೊರಗೆ ಇರುವುದರಿಂದ ನನ್ನನ್ನು ಮತ್ತು ನನ್ನ ಇಡೀ ಕುಟುಂಬವನ್ನು ಹತ್ಯೆ ಮಾಡುವ ಸಾಧ್ಯತೆ ಇದೆ. ಅಪರಾಧಿಗಳು ಹೊರಗಡೆ ಇರುವುದಾದರೇ ನಮ್ಮನ್ನು ಜೈಲಿಗೆ ಹಾಕಬೇಕು. ನಾವು ಅಲ್ಲಿಯಾದರೂ ಜೀವಂತವಾಗಿರುತ್ತೇವೆ. ಅಪರಾಧಿಗಳ ಬೆಂಬಲಿಗರಿಂದ ನಮಗೆ ಜೀವ ಬೆದರಿಕೆಯಿದ್ದು, ಭಯದಲ್ಲಿ ಬದುಕುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.