ADVERTISEMENT

ಉನ್ನಾವ್‌ ಅತ್ಯಾಚಾರ ಸಂತ್ರಸ್ತೆ ಜೀವನ್ಮರಣ ಹೋರಾಟ: ಉಳಿಯುವ ಸಾಧ್ಯತೆ ಕ್ಷೀಣ

ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾಕೆ ಈಗ ಬದುಕಿಗಾಗಿ ಹೋರಾಟ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 14:29 IST
Last Updated 6 ಡಿಸೆಂಬರ್ 2019, 14:29 IST
   

ನವದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಉನ್ನಾವ್‌ ಅತ್ಯಾಚಾರ ಸಂತ್ರಸ್ತೆ ಆರೋಪಿಗಳೇ ಇಟ್ಟ ಕಿಚ್ಚಿಗೆ ಬೆಂದು ಈಗ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಆಕೆ ಉಳಿಯುವ ಸಾಧ್ಯತೆ ಅತ್ಯಂತ ಕ್ಷೀಣ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

‘ಶೇ. 90ರಷ್ಟು ಸುಟ್ಟಗಾಯಗಳಿಗೆ ತುತ್ತಾಗಿರುವ ಆಕೆಯನ್ನು ಉಳಿಸಿಕೊಳ್ಳಲು ನಮ್ಮೆಲ್ಲ ಶಕ್ತಿಯನ್ನೂ ಮೀರಿ ಪ್ರಯತ್ನಿಸುತ್ತಿದ್ದೇವೆ. ಆದರೆ, ಆಕೆ ಸ್ಥಿತಿ ಗಂಭೀರವಾಗಿದೆ. ಬದುಕುಳಿಯುವ ಸಾಧ್ಯತೆಗಳು ತೀರಾ ಕ್ಷೀಣ. ಹೀಗಾಗಿ ಆಕೆಯನ್ನು ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಇರಿಸಲಾಗಿದೆ,’ ಎಂದು ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆಯ ವೈದ್ಯ ಸುನಿಲ್‌ ಗುಪ್ತ ತಿಳಿಸಿದ್ದಾರೆ.

ADVERTISEMENT

ಉನ್ನಾವ್‌ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಗುರುವಾರ ರಾಯ್‌ಬರೇಲಿ ನ್ಯಾಯಾಲಯಕ್ಕೆ ಬರುತ್ತಿದ್ದ ವೇಳೆ ಆರು ಮಂದಿದುಷ್ಕರ್ಮಿಗಳು ಆಕೆಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದರು.

ಹರಿಶಂಕರ್ ತ್ರಿವೇದಿ, ಕಿಶೋರ್, ಶುಭಂ, ಶಿವಂ, ಉಮೇಶ್ ಮತ್ತು ಇಬ್ಬರು ತನ್ನ ಮೇಲೆ ದಾಳಿ ನಡೆಸಿದ್ದಾಗಿ ಸಂತ್ರಸ್ತೆ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಇದರಲ್ಲಿ ಇಬ್ಬರು ಅತ್ಯಾಚಾರ ಪ್ರಕರಣದ ಆರೋಪಿಗಳೂ ಆಗಿದ್ದಾರೆ.

ಘಟನೆಯಲ್ಲಿ ಶೇ. 90ರಷ್ಟು ಸುಟ್ಟ ಗಾಯಗಳಾಗಿದ್ದ ಸಂತ್ರಸ್ತೆಯನ್ನು ಮೊದಲಿಗೆ ಲಖನೌದ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸಂಜೆ ಹೊತ್ತಿಗೆ ಏರ್‌ ಆಂಬುಲೆನ್ಸ್‌ ಮೂಲಕ ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದ ಡಿಸೆಂಬರ್‌ನಲ್ಲಿ ಸಂತ್ರಸ್ತೆಯನ್ನು ಅಪಹರಿಸಿ ಅತ್ಯಾಚಾರ ನಡೆಸಲಾಗಿತ್ತು. ಶಿವರಾಂ ತ್ರಿವೇದಿ ಮತ್ತು ಶುಭಂ ತ್ರಿವೇದಿ ಎಂಬ ಆರೋಪಿಗಳು ಈ ಕೃತ್ಯ ಎಸಗಿದ್ದರು. ಮಾರ್ಚ್‌ನಲ್ಲಿ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.