ADVERTISEMENT

‘ರಾಷ್ಟ್ರಪತ್ನಿ’ ವಿವಾದ: ನನ್ನನ್ನು ಅನಗತ್ಯವಾಗಿ ಎಳೆದುತರಲಾಗುತ್ತಿದೆ ಎಂದ ಸೋನಿಯಾ

ಐಎಎನ್ಎಸ್
Published 28 ಜುಲೈ 2022, 10:22 IST
Last Updated 28 ಜುಲೈ 2022, 10:22 IST
ಸಂಸತ್‌ ಕಲಾಪದಲ್ಲಿ ಅಧೀರ್‌ ರಂಜನ್‌ ಚೌಧರಿ ಮತ್ತು ಸೋನಿಯಾ ಗಾಂಧಿ
ಸಂಸತ್‌ ಕಲಾಪದಲ್ಲಿ ಅಧೀರ್‌ ರಂಜನ್‌ ಚೌಧರಿ ಮತ್ತು ಸೋನಿಯಾ ಗಾಂಧಿ    

ನವದೆಹಲಿ: ರಾಷ್ಟ್ರಪತಿಗಳನ್ನು ರಾಷ್ಟ್ರಪತ್ನಿ ಎಂದು ಸಂಬೋಧಿಸಿದ ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಈಗಾಗಲೇ ಕ್ಷಮೆಯಾಚಿಸಿದ್ದಾರೆ. ಈ ವಿವಾವದಲ್ಲಿ ನನ್ನನ್ನು ಅನಗತ್ಯವಾಗಿ ಎಳೆದುತರಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಹೇಳಿದ್ದಾರೆ.

ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅಧೀರ್‌ ರಂಜನ್‌ ಚೌಧರಿ ಅವರು ಲೋಕಸಭೆಯಲ್ಲಿ 'ರಾಷ್ಟ್ರಪತ್ನಿ' ಎಂದು ಉಲ್ಲೇಖಿಸಿದ್ದರು. ಹೀಗಾಗಿ ವಿವಾದ ಸೃಷ್ಟಿಯಾಗಿದೆ. ಈ ಬೆಳವಣಿಗೆ ಸಂಸತ್‌ ಕಲಾಪಕ್ಕೂ ಅಡ್ಡಿಯುಂಟು ಮಾಡಿದೆ.

ಗುರುವಾರ ಸದನವನ್ನು ಮುಂದೂಡಿದ ನಂತರ, ಸದನದಿಂದ ಹೊರ ನಡೆಯುತ್ತಿದ್ದ ಸೋನಿಯಾ ಗಾಂಧಿ ಅವರ ವಿರುದ್ಧ ಬಿಜೆಪಿಯ ಕೆಲ ಮಹಿಳಾ ಸಂಸದರು ಘೋಷಣೆ ಕೂಗಿದರು. ಆಗ ಸೋನಿಯಾ ಗಾಂಧಿ ಅವರು ಹಿರಿಯ ಬಿಜೆಪಿ ಸಂಸದೆ ರಮಾದೇವಿ ಅವರ ಬಳಿಗೆ ತೆರಳಿ, ನನ್ನನ್ನು ಏಕೆ ಎಳೆದುತರಲಾಗುತ್ತಿದೆ ಎಂದು ಪ್ರಶ್ನೆ ಮಾಡಿದರು ಎಂದು ವರದಿಯಾಗಿದೆ.

ADVERTISEMENT

ಅಲ್ಲಿಯೇ ಇದ್ದ ಸಚಿವೆ ಸ್ಮೃತಿ ಇರಾನಿ ಅವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಸೋನಿಯಾ ಅವರು ತಮ್ಮೊಂದಿಗೆ ಮಾತನಾಡದಂತೆ ಅವರಿಗೆ ತಾಕೀತು ಮಾಡಿದರೆನ್ನಲಾಗಿದೆ. ನಂತರ, ಎನ್‌ಸಿಪಿಯ ಸುಪ್ರಿಯಾ ಸುಳೆ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸದಸ್ಯರನ್ನು ಸಮಾಧಾನಪಡಿಸಿದರು ಎಂದು ಮೂಲಗಳು ಹೇಳಿವೆ.

ಘಟನೆಯ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಜೈರಾಮ್ ರಮೇಶ್, ’ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಇಂದು ಲೋಕಸಭೆಯಲ್ಲಿ ದೌರ್ಜನ್ಯ ನಡೆಸಿದ್ದಾರೆ. ಅತಿರೇಕವಾಗಿ ವರ್ತಿಸಿದ್ದಾರೆ. ಆದರೆ ಅವರನ್ನು ಸ್ಪೀಕರ್ ಪ್ರಶ್ನಿಸುತ್ತಾರೆಯೇ? ನಿಯಮಗಳು ವಿರೋಧ ಪಕ್ಷಗಳಿಗೆ ಮಾತ್ರವೇ?’ ಎಂದು ಪ್ರಶ್ನೆ ಮಾಡಿದ್ದಾರೆ.

ವಿವಾದದ ಹಿನ್ನೆಲೆಯಲ್ಲಿ ಅಧೀರ್ ರಂಜನ್ ಚೌಧರಿ ಹೇಳಿಕೆ ಬಿಡುಗಡೆ ಮಾಡಿದ್ದು, ‘ನಾನು ರಾಷ್ಟ್ರಪತಿಯವರನ್ನು ಅವಮಾನಿಸುವ ಬಗ್ಗೆ ಆಲೋಚನೆಯನ್ನು ಸಹ ನಾನು ಮಾಡಿಲ್ಲ. ತಪ್ಪಾಗಿದೆ. ರಾಷ್ಟ್ರಪತಿ ಅವರಿಗೆ ನೋವಾಗಿದ್ದರೆ, ವೈಯಕ್ತಿವಾಗಿ ಭೇಟಿಯಾಗಿ ಕ್ಷಮೆ ಕೇಳುತ್ತೇನೆ' ಎಂದು ತಿಳಿಸಿದ್ದಾರೆ.

ಬಿಜೆಪಿಯು ಈ ವಿವಾದದಲ್ಲಿ ಸೋನಿಯಾ ಗಾಂಧಿ ಅವರ ಹೆಸರನ್ನು ಎಳೆದು ತರುತ್ತಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ಚೌಧರಿ, 'ಅವರು ಬಯಸುವುದಾದರೆ, ನನ್ನನ್ನು ನೇಣಿಗೇರಿಸಲಿ. ನಾನು ಶಿಕ್ಷೆ ಅನುಭವಿಸಲು ಸಿದ್ಧ. ಆದರೆ, ಅವರನ್ನು (ಸೋನಿಯಾ ಗಾಂಧಿ) ಈ ವಿಚಾರದಲ್ಲಿ ಎಳೆದು ತರುತ್ತಿರುವುದು ಏಕೆ?' ಎಂದು ಪ್ರಶ್ನಿಸಿದ್ದಾರೆ.

ಅಧೀರ್‌ ರಂಜನ್‌ ಚೌದರಿ ಅವರು ಪ್ರಕರಣದ ಬಗ್ಗೆ ಕ್ಷಮೆಯಾಚಿಸಿದ್ದಾರೆ ಎಂದು ಸೋನಿಯಾ ಗಾಂಧಿ ಅವರೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.