
ಬಂಧನ (ಸಾಂದರ್ಭಿಕ ಚಿತ್ರ)
ಮುಜಫ್ಫರ್‌ನಗರ, ಉತ್ತರಪ್ರದೇಶ: ದೇಶದಲ್ಲಿ ನಡೆದಿದೆ ಎನ್ನಲಾದ ಭಯೋತ್ಪಾದಕ ಚಟುವಟಿಕೆಗಳ ಕುರಿತು ತನಿಖೆಯನ್ನು ಮತ್ತಷ್ಟು ವಿಸ್ತಾರಗೊಳಿಸಿರುವ ಗುಜರಾತ್‌ನ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್) ಪೊಲೀಸರು ಉತ್ತರ ಪ್ರದೇಶದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಶಾಮಲಿ ಜಿಲ್ಲೆಯ ಝಿಂಝಾನಾ ಪಟ್ಟಣದ ಆಜಾದ್ ಸುಲೇಮಾನ್ ಶೇಖ್ (20) ಹಾಗೂ ಲಖೀಂಪುರ ಖೇರಿಯ ಮೊಹಮ್ಮದ್ ಸುಹೈಲ್ ಖಾನ್ (23)ನನ್ನು ಬಂಧಿಸಲಾಗಿದೆ. ಇಬ್ಬರೂ ಬುಠಾನ ಪಟ್ಟಣದ ಮದರಸಾವೊಂದರಲ್ಲಿ ಒಟ್ಟಿಗೆ ಕಲಿತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
‘ಇಬ್ಬರೂ ಯುವಕರು ಹಫೀಜ್–ಎ– ಕುರ್‌ಆನ್ ಕಲಿಯಲು ಬರುತ್ತಿದ್ದರು. ಬಂಧನಕ್ಕೂ ಬಹಳ ಮುಂಚಿತವಾಗಿಯೇ ಅವರು ಇಲ್ಲಿಂದ ಬಿಟ್ಟು ಹೊರಟುಹೋಗಿದ್ದರು’ ಎಂದು ಬುಠಾನ ಮದರಸಾದ ಮುಖ್ಯಸ್ಥ ಮೌಲಾನಾ ದೌಡ್ ತಿಳಿಸಿದ್ದಾರೆ.
‘ಅಜಾದ್ 2018–19ರ ಅವಧಿಯಲ್ಲಿ ಇಲ್ಲಿ ಕಲಿಯಲು ಬರುತ್ತಿದ್ದ. ಕೋವಿಡ್–19 ಸಂದರ್ಭದಲ್ಲಿ ಮದರಸಾ ತನ್ನ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿತ್ತು. ಬಳಿಕ ಅವರು ಹಿಂತಿರುಗಿರಲಿಲ್ಲ. ಸುಹೈಲ್ ಮೂರು ತಿಂಗಳ ಹಿಂದೆ ಕಲಿಯಲು ಬಂದಿದ್ದ. ನವೆಂಬರ್ 5ರಂದು ತಂದೆಯ ಅನಾರೋಗ್ಯದ ಕಾರಣ ಹೇಳಿ ಹೋದವನು ಮತ್ತೆ ಬರಲಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.
‘ಮದರಸಾವು ಕೇವಲ ಧಾರ್ಮಿಕ ಶಿಕ್ಷಣ ಸಂಸ್ಥೆಯಾಗಿದೆ. ಈಗ ನಡೆದ ಅಕ್ರಮ ಹಾಗೂ ಕಾನೂನು ವಿರೋಧಿ ಚಟುವಟಿಕೆಗೆ ಯಾವುದೇ ಸಂಬಂಧ ಇಲ್ಲ. ಮಾಧ್ಯಮಗಳ ವರದಿ ಬಳಿಕವೇ ಅವರಿಬ್ಬರ ಬಂಧನವಾಗಿರುವುದು ತಿಳಿದುಬಂದಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಆಜಾದ್ ತಂದೆ ಸುಲೇಮಾನ್ ಝಿಂಝಾನಾ ಪಟ್ಟಣದಲ್ಲಿ ಕಟ್ಟಡ ಕಾರ್ಮಿಕರಾಗಿದ್ದಾರೆ.
‘ನನ್ನ ಮಗ ಅಮಾಯಕ. ಯಾವ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ ಎಂದು ನನಗೆ ತಿಳಿದಿಲ್ಲ’ ಪ್ರತಿಕ್ರಿಯಿಸಿದ್ದಾರೆ.
‘ಪಶ್ಚಿಮ ಬಂಗಾಳದಲ್ಲಿರುವ ತಬ್ಲಿಗಿ ಜಮಾತ್‌ಗೆ 40 ದಿನಗಳ ಮಟ್ಟಿಗೆ ತೆರಳುವುದಾಗಿ ತಿಳಿಸಿದ್ದ. ನಂತರ ಮದರಸಾಕ್ಕೆ ಹಿಂತಿರುಗುವುದಾಗಿ ಹೇಳಿದ್ದ. ಆದರೆ ಅಲ್ಲಿಗೆ ತಲುಪಿರಲಿಲ್ಲ. ಈಗ ಬಂಧನದ ಸುದ್ದಿ ತಲುಪಿದೆ’ ಎಂದು ವಿವರಿಸಿದ್ದಾರೆ.
ಆಜಾದ್‌ನನ್ನು ಗುಜರಾತ್ ಎಟಿಎಸ್ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಉತ್ತರ ಪ್ರದೇಶ ಎಟಿಎಸ್ ಪೊಲೀಸರು ಕೂಡ ವಿಚಾರಣೆ ನಡೆಸುತ್ತಿದ್ದಾರೆ. ಆತನ ಹೆಸರಿನಲ್ಲಿ ಯಾವುದೇ ಪಾಸ್‌ಪೋರ್ಟ್ ಇಲ್ಲ. ನಾವು ಆತನ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದ್ದು, ಸ್ಥಳೀಯರ ಜೊತೆ ಸಂಪರ್ಕ ಹೊಂದಿದ್ದಾನೆಯೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ’ ಎಂದು ಶಾಮಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಪಿ.ಸಿಂಗ್ ತಿಳಿಸಿದ್ದಾರೆ.
ಆಜಾದ್ ಹಾಗೂ ಸುಹೈಲ್‌ನನ್ನು ಗುಜರಾತ್‌ನ ಎಟಿಎಸ್ ಪೊಲೀಸರು ನವೆಂಬರ್ 8ರಂದೇ ಬಂಧಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.