ADVERTISEMENT

ಬಿಜೆಪಿ ನಾಯಕನಿಗೆ 5 ಡೋಸ್ ಕೋವಿಡ್ ಲಸಿಕೆ, 6ನೇ ಡೋಸ್‌ಗೆ ದಿನ ನಿಗದಿ!

ಪಿಟಿಐ
Published 20 ಸೆಪ್ಟೆಂಬರ್ 2021, 3:52 IST
Last Updated 20 ಸೆಪ್ಟೆಂಬರ್ 2021, 3:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮೀರತ್: ಇಲ್ಲಿನ ಬೂತ್ ಮಟ್ಟದ ಬಿಜೆಪಿ ನಾಯಕನ ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಆತನಿಗೆ ಐದು ಬಾರಿ ಕೋವಿಡ್ ಲಸಿಕೆ ಡೋಸ್ ನೀಡಲಾಗಿದ್ದು, ಆರನೇ ಬಾರಿಗೆ ದಿನ ನಿಗದಿಯಾಗಿರುವಂತೆ ತಪ್ಪಾಗಿ ತೋರಿಸುತ್ತಿದೆ. ಇದು ಕಿಡಿಗೇಡಿತನ ಮತ್ತು ಪಿತೂರಿಯ ಪ್ರಕರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಸರ್ಧಾನ ಪ್ರದೇಶದಲ್ಲಿ ಪ್ರಕರಣ ವರದಿಯಾಗಿದ್ದು, ರಾಮ್‌ಪಾಲ್ ಸಿಂಗ್ (73) ಅವರು ಬೂತ್ ನಂ 79 ರ ಬಿಜೆಪಿ ಅಧ್ಯಕ್ಷರು ಮತ್ತು ಹಿಂದೂ ಯುವ ವಾಹಿನಿಯ ಸದಸ್ಯರೂ ಆಗಿದ್ದಾರೆ. ಇವರ ಲಸಿಕೆ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಕೊಂಡಾಗ ಘಟನೆ ಬೆಳಕಿಗೆ ಬಂದಿದೆ.

ಪ್ರಮಾಣ ಪತ್ರದಲ್ಲಿ ತಮಗೆ ಈಗಾಗಲೇ ಐದು ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ ಮತ್ತು ಆರನೇ ಡೋಸ್‌ಗೆ ದಿನಾಂಕ ನಿಗದಿಪಡಿಸಲಾಗಿದೆ. ಇದು ಆರೋಗ್ಯ ಇಲಾಖೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸಿಂಗ್ ಅವರು ತಮ್ಮ ಮೊದಲ ಡೋಸ್‌ ಅನ್ನು ಮಾರ್ಚ್ 16 ರಂದು ಮತ್ತು ಎರಡನೆಯದನ್ನು ಮೇ 8 ರಂದು ಪಡೆದಿದ್ದರು ಎಂದು ಹೇಳಿದರು.

ಬಳಿಕ ಅವರು ಅಧಿಕೃತ ಪೋರ್ಟಲ್‌ನಿಂದ ತಮ್ಮ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಅದರಲ್ಲಿ ಈಗಾಗಲೇ ಐದು ಡೋಸ್ ಪಡೆದಿರುವಂತೆ ಮತ್ತು ಡಿಸೆಂಬರ್ 2021 ಮತ್ತು ಜನವರಿ 2022 ರ ನಡುವೆ ಆರನೇ ಡೋಸ್‌ ಅನ್ನು ನಿಗದಿಪಡಿಸಲಾಗಿರುವುದನ್ನು ತೋರಿಸಿದೆ.

ಪ್ರಮಾಣಪತ್ರದಲ್ಲಿ ತನ್ನ ಮೊದಲ ಡೋಸನ್ನು ಮಾರ್ಚ್ 16 ರಂದು, ಎರಡನೆಯದು ಮೇ 8 ರಂದು, ಮೂರನೆಯದು ಮೇ 15 ರಂದು ಮತ್ತು ನಾಲ್ಕನೇ ಮತ್ತು ಐದನೆಯದು ಸೆಪ್ಟೆಂಬರ್ 15 ರಂದು ತೋರಿಸುತ್ತಿದೆ ಎಂದು ಅವರು ಹೇಳಿದರು.

ಈ ಕುರಿತು ಮುಖ್ಯ ವೈದ್ಯಕೀಯ ಅಧಿಕಾರಿ ಅಖಿಲೇಶ್ ಮೋಹನ್ ಅವರನ್ನು ಸಂಪರ್ಕಿಸಿದಾಗ, ಲಸಿಕೆಗಾಗಿ ಯಾರಾದರೂ ಎರಡು ಬಾರಿ ಅಥವಾ ಎರಡಕ್ಕಿಂತ ಹೆಚ್ಚು ಬಾರಿ ನೋಂದಣಿಯಾಗಿರುವ ಮೊದಲ ಪ್ರಕರಣ ಇದು ಎಂದು ಹೇಳಿದ್ದಾರೆ.

'ಇದು ಕಿಡಿಗೇಡಿತನ ಮತ್ತು ಪಿತೂರಿಯ ಪ್ರಕರಣವಾಗಿದೆ' ಎಂದು ಅವರು ಪಿಟಿಐಗೆ ತಿಳಿಸಿದ್ದು, 'ಕೆಲವು ಕಿಡಿಗೇಡಿಗಳು ಪೋರ್ಟಲ್‌ ಅನ್ನು ಹ್ಯಾಕ್ ಮಾಡಿದಂತೆ ತೋರುತ್ತದೆ'. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಲಸಿಕೆ ಅಧಿಕಾರಿ ಪ್ರವೀಣ್ ಗೌತಮ್ ಅವರನ್ನು ಕೋರಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.