ADVERTISEMENT

ನಕಲಿ ವೈದ್ಯರಿಂದ ಚಿಕಿತ್ಸೆ, ಮಗು ಸಾವು–ಇಬ್ಬರ ಬಂಧನ

ಪಿಟಿಐ
Published 27 ಮೇ 2025, 13:52 IST
Last Updated 27 ಮೇ 2025, 13:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೌಶಾಂಬಿ (ಉತ್ತರ ಪ್ರದೇಶ): ಇಲ್ಲಿನ ಚರವಾ ಮನುರಿ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ಸೋಗಿನಲ್ಲಿ ಸಹೋದರರಿಬ್ಬರು ಐದು ವರ್ಷದ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಈ ವೇಳೆ ಮಗು ಮೃತಪಟ್ಟಿದೆ. ಘಟನೆ ನಡೆದು ಎರಡು ತಿಂಗಳ ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಇಲ್ಲಿನ ಅನ್ಮೋಲ್‌ ಆಸ್ಪತ್ರೆಯಲ್ಲಿ ಮಾ.16ರಂದು ಹಿರಿಯ ವೈದ್ಯರು ಗೈರುಹಾಜರಾಗಿದ್ದರು. ಈ ವೇಳೆ ಆಸ್ಪತ್ರೆಯಲ್ಲಿದ್ದ ಇಬ್ಬರು ಸಹೋದರರು ತಾವೇ ವೈದ್ಯರೆಂದು ನಂಬಿಸಿ ಇಲ್ಲಿನ ಸಿರಿಯಾವಾ ಕಾಲಾ ಗ್ರಾಮದ ರಾಮ್‌ ಅಸ್ರೆ ಅವರ ಮಗ ದಿವ್ಯಾಂಶು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದರು. ಈ ವೇಳೆ ಮಗ ಮೃತಪಟ್ಟ ಕುರಿತು ಅವರ ತಂದೆ ಚರವಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.  

‘ಪ್ರಕರಣ ದಾಖಲಿಸಿ ಸ್ಥಳೀಯ ನಿವಾಸಿಗಳಾದ ವಿಕಾಸ್‌ಕುಮಾರ್‌(26,) ವಿಶೇಷ್‌ಕುಮಾರ್‌ (25) ಅವರನ್ನು ಮೇ 25ರಂದು ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಪದವಿ ಹೊಂದಿರದಿದ್ದರೂ, ವೈದ್ಯರೆಂದು ಬಿಂಬಿಸಿಕೊಂಡು ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದನ್ನು ಒಪ್ಪಿಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಶ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ಮಗು ಆಸ್ಪತ್ರೆಗೆ ಬಂದ ವೇಳೆ ಹಿರಿಯ ವೈದ್ಯರು ಆಸ್ಪತ್ರೆಯಲ್ಲಿ ಇರಲಿಲ್ಲ. ಇಬ್ಬರು ಸಹೋದರರೇ ಮಗುವಿನ ಕಾಲಿನ ಶಸ್ತ್ರಚಿಕಿತ್ಸೆ ನಡೆಸಿದ್ದು, ಈ ವೇಳೆ ಮಗು ಮೃತಪಟ್ಟಿದೆ.

ಘಟನೆ ಬಳಿಕ ಖಾಸಗಿ ಕೌಶಾಂಬಿ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಖಾಸಗಿ ಆಸ್ಪತ್ರೆಯನ್ನು ಮುಚ್ಚಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.