ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ‘2027ರಲ್ಲಿ ನಡೆಯುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ಜಂಟಿಯಾಗಿ ಎದುರಿಸಲಿದೆ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ತಿಳಿಸಿದ್ದಾರೆ.
ಇಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘2024ರ ಲೋಕಸಭಾ ಚುನಾವಣೆಗೂ ಮುನ್ನ ‘ಇಂಡಿಯಾ’ ಮೈತ್ರಿಕೂಟವು ರಚನೆಯಾಗಿತ್ತು. ಈಗಲೂ ಒಕ್ಕೂಟವಿದ್ದು, ಮುಂದೆಯೂ ಮುಂದುವರಿಯಲಿದೆ. ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತರು ಸೇರಿ, ರಾಜ್ಯದ ಬಿಜೆಪಿ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯಲಿದ್ದಾರೆ’ ಎಂದು ಹೇಳಿದರು.
‘ವಕ್ಫ್ ತಿದ್ದುಪಡಿ ಕಾಯ್ದೆ ಬಳಿಕ ರಾಜ್ಯದಲ್ಲಿ ಬಿಜೆಪಿಯು ಮಾಫಿಯಾ ಮಾದರಿಯಲ್ಲಿ ಭೂಮಿಯನ್ನು ಕಿತ್ತುಕೊಳ್ಳುತ್ತಿದೆ. ಎಲ್ಲಿಯೇ ಜಾಗ ಕಂಡರೂ, ಅದು ವಶಕ್ಕೆ ಪಡೆಯುತ್ತಿದೆ. ಬಿಜೆಪಿಯು ಲ್ಯಾಂಡ್ ಮಾಫಿಯಾ ಪಕ್ಷವಾಗಿದೆ’ ಎಂದು ಆರೋಪಿಸಿದರು.
‘ನೋಟು ರದ್ದು, ಜಿಎಸ್‌ಟಿ ಮೂಲಕ ಜನರ ಹಣವನ್ನು ಕಿತ್ತುಕೊಂಡ ಬಿಜೆಪಿಯು, ಮೀಸಲಾತಿಯನ್ನು ಕಡಿತಗೊಳಿಸುತ್ತಿದೆ’ ಎಂದು ದೂರಿದರು.
‘ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳವನ್ನು ನಿರ್ವಹಿಸುವಲ್ಲಿ ಬಿಜೆಪಿಯು ಸಂಪೂರ್ಣವಾಗಿ ವಿಫಲವಾಗಿದ್ದು, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ತನಿಖೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.