ADVERTISEMENT

ಉತ್ತರ ಪ್ರದೇಶದ ರಾಜ್ಯಪಾಲರೂ ಹೆಣ್ಣೇ...: ಉನ್ನಾವ್ ದುರ್ಘಟನೆಗೆ ಮಾಯಾವತಿ ಗುಡುಗು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 10:20 IST
Last Updated 7 ಡಿಸೆಂಬರ್ 2019, 10:20 IST
   

ಲಖನೌ: ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್‌ ಪಟೇಲ್‌ ಅವರೂ ಒಬ್ಬ ಹೆಣ್ಣು. ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಅವರು ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಆಗ್ರಹಿಸಿದ್ದಾರೆ.‌

ಉನ್ನಾವ್‌ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಮೇಲಿನ ದಾಳಿ ಮತ್ತು ಸಂತ್ರಸ್ತೆಯ ಸಾವಿನ ಹಿನ್ನೆಲೆಯಲ್ಲಿ ಮಾಯಾವತಿ ಇಂದು ಉತ್ತರ ಪ್ರದೇಶದ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರಿಗೆ ಎದುರಾಗಿರುವ ಪರಿಸ್ಥಿತಿಯನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಬೇಕು. ಪರಿಸ್ಥಿತಿ ತಹಬದಿಗೆ ತರಲು ಅವರು ಮುಖ್ಯಮಂತ್ರಿ ಮತ್ತು ಪೊಲೀಸರೊಂದಿಗೆ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಅವರು ಬಿಜೆಪಿ ಸರ್ಕಾರದ ವಿರುದ್ಧವೂ ಗುಡುಗಿದರು. ರಾಜ್ಯದಲ್ಲಿರುವ ಯೋಗಿ ಆದಿತ್ಯನಾಥ್‌ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅವರು ಕಿಡಿ ಕಾರಿದರು.

ADVERTISEMENT

ಇನ್ನೊಂದೆಡೆ ಮಗಳ ಸಾವಿನಿಂದಾಗಿ ನೊಂದಿರುವ ಸಂತ್ರಸ್ತೆಯ ಕುಟುಂಬ, ಹೈದರಾಬಾದ್‌ ಮಾದರಿಯಲ್ಲೇ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿ ಕೊಲ್ಲಬೇಕು ಎಂದು ಆಗ್ರಹಿಸಿದೆ.

‘ನನಗೆ ಹಣ ಬೇಕಿಲ್ಲ. ಯಾವುದೇ ನೆರವು ಬೇಕಿಲ್ಲ. ನನ್ನ ಮಗಳ ಈ ಪರಿಸ್ಥಿತಿಗೆ ಕಾರಣರಾದವರನ್ನು ಹೈದರಾಬಾದ್‌ ರೀತಿಯಲ್ಲೇ ಎನ್‌ಕೌಂಟರ್ ಮಾಡಿ ಕೊಲ್ಲಬೇಕು. ‌‘ಆರೋಪಿಗಳನ್ನು ಅಟ್ಟಾಡಿಸಿಕೊಂಡು ಹೋಗಿ ಗುಂಡಿಕ್ಕಿ ಕೊಲ್ಲುವುದನ್ನು ನಾನು ನೋಡಬೇಕು,’ ಎಂದು ಉನ್ನಾವ್‌ ಅತ್ಯಾಚಾರ ಸಂತ್ರಸ್ತೆ ತಂದೆ ಹೇಳಿದ್ದಾರೆ.

ಇನ್ನು ಉನ್ನಾವ್‌ ಅತ್ಯಾಚಾರ ಸಂತ್ರಸ್ತೆಯ ಮೃತ ದೇಹವನ್ನು ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆ ವೈದ್ಯರು ಶನಿವಾರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ವಿಷ ಪ್ರಾಶನದಿಂದಾಗಲಿ, ಇರಿತದಿಂದಾಗಲಿ ಅವರ ಸಾವು ಸಂಭವಿಸಿಲ್ಲ. ತೀವ್ರ ಸುಟ್ಟ ಗಾಯಗಳಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಂತರ ತಿಳಿಸಿದರು.

ಸಂತ್ರಸ್ತೆಯ ಅಂತಿಮ ಸಂಸ್ಕಾರವನ್ನು ಯಾವಾಗ ನಡೆಸಬೇಕು ಎಂಬುದರ ಬಗ್ಗೆ ಕುಟುಂಬಸ್ಥರು ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ.

ಅತ್ಯಾಚಾರ ಪ್ರಕರಣದ ವಿಚಾರಣೆಗೆಂದು ಗುರುವಾರ ಬೆಳಗ್ಗೆನ್ಯಾಯಾಲಯಕ್ಕೆ ತೆರಳುತ್ತಿದ್ದಸಂತ್ರಸ್ತೆಯ ಮೇಲೆ ಅತ್ಯಾಚಾರದ ಆರೋಪಿಗಳೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದರು. ಶೇ 90 ರಷ್ಟು ಸುಟ್ಟಗಾಯಗೆ ತುತ್ತಾಗಿದ್ದ ಆಕೆಯನ್ನು ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಮಧ್ಯರಾತ್ರಿ ಸಂತ್ರಸ್ತೆ ಕೊನೆಯುಸಿರೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.