ADVERTISEMENT

ಮಹಾಕುಂಭಮೇಳ |ಸಾವಿನ ನಿಖರ ಸಂಖ್ಯೆ ಬಿಡುಗಡೆ ಮಾಡದ ಯುಪಿ ಸರ್ಕಾರ: ಮಮತಾ ಬ್ಯಾನರ್ಜಿ

ಪಿಟಿಐ
Published 13 ಫೆಬ್ರುವರಿ 2025, 2:31 IST
Last Updated 13 ಫೆಬ್ರುವರಿ 2025, 2:31 IST
<div class="paragraphs"><p>ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ </p></div>

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

   

–ಪಿಟಿಐ ಚಿತ್ರ

ಕೋಲ್ಕತ್ತ: ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ನಿಖರ ಸಂಖ್ಯೆಯನ್ನು ಉತ್ತರ ಪ್ರದೇಶ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ADVERTISEMENT

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾ ಕುಂಭಮೇಳದಲ್ಲಿ ಎಷ್ಟೋ ಜನರು ಮೃತಪಟ್ಟಿದ್ದಾರೆ. ಆದರೆ, ಉತ್ತರ ಪ್ರದೇಶ ಸರ್ಕಾರ ಸಾವಿನ ನಿಖರ ಸಂಖ್ಯೆಯನ್ನು ಬಿಡುಗಡೆ ಮಾಡುತ್ತಿಲ್ಲ. ಅಲ್ಲದೆ, ಸ್ಥಳದಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿಲ್ಲ’ ಎಂದು ಹೇಳಿದ್ದಾರೆ.

ಕಾಲ್ತುಳಿತದಲ್ಲಿ ಮೃತಪಟ್ಟ ಬಂಗಾಳ ನಿವಾಸಿಗಳ ಮೃತದೇಹಗಳನ್ನು ಸೂಕ್ತ ದಾಖಲೆಗಳಿಲ್ಲದೆ ವಾಪಸ್‌ ಕಳುಹಿಸಲಾಗಿದ್ದು, ಅವರ ಕುಟುಂಬಗಳಿಗೆ ಪರಿಹಾರ ಸಿಗುವುದು ಕಷ್ಟಕರವಾಗಿತ್ತು. ಕುಟುಂಬಗಳಿಗೆ ಮರಣ ಪ್ರಮಾಣ ಪತ್ರಗಳನ್ನು ನೀಡಲು ನಾವು ಮರಣೋತ್ತರ ಪರೀಕ್ಷೆಗಳನ್ನು ನಡೆಸಿದ್ದೇವೆ ಎಂದು ಮಮತಾ ತಿಳಿಸಿದ್ದಾರೆ.

ಮಹಾ ಕುಂಭಮೇಳದ ‘ವಿಐಪಿ ಸಂಸ್ಕೃತಿ’ಯನ್ನು ಟೀಕಿಸಿದ ಮಮತಾ ಬ್ಯಾನರ್ಜಿ, ‘ಸಾಮಾನ್ಯ ಜನರಿಗೆ ತೊಂದರೆಯಾಗಬಾರದೆಂದು ನಾನು ಪವಿತ್ರ ಸ್ನಾನಕ್ಕಾಗಿ ಮಹಾ ಕುಂಭಮೇಳಕ್ಕೆ ಭೇಟಿ ನೀಡಿಲ್ಲ’ ಎಂದು ಹೇಳಿದ್ದಾರೆ.

ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ದುರಂತ ಸಂಭವಿಸಿದ ಬಳಿಕ ಈವರೆಗೆ ಕೇಂದ್ರ ಸರ್ಕಾರವು ಯಾವುದೇ ತನಿಖಾ ಸಮಿತಿಯನ್ನು ಕಳುಹಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಜನವರಿ 29ರಂದು ಮಹಾಕುಂಭದ ಸಂಗಮ ಪ್ರದೇಶದಲ್ಲಿ ಲಕ್ಷಾಂತರ ಯಾತ್ರಾರ್ಥಿಗಳು ಪವಿತ್ರ ಸ್ನಾನ ಮಾಡಲು ಆಗಮಿಸಿದ್ದ ಕಾರಣ, ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಸಾವಿಗೀಡಾಗಿದ್ದರು. 60 ಜನರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.