ಜಾರಿ ನಿರ್ದೇಶನಾಲಯ
ಸಂಭಲ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ವಿಮೆಯ ನಕಲಿ ಪಾಲಿಸಿ, ನಕಲಿ ದಾಖಲೆಗಳು ಮತ್ತು ವಿಮೆ ಹಣ ಪಡೆಯಲು ಕೊಲೆ ನಡೆಸಿರುವುದೂ ಒಳಗೊಂಡಂತೆ ಬೃಹತ್ ಹಗರಣ ಬೆಳಕಿಗೆ ಬಂದಿದೆ. ವಂಚನೆಯ ಅಂದಾಜು ಮೊತ್ತ ₹ 100 ಕೋಟಿ ದಾಟಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯ (ಇ.ಡಿ) ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿತ ದಾಖಲೆಗಳು ಮತ್ತು ಎಫ್‌ಐಆರ್ ಪ್ರತಿಗಳನ್ನು ನೀಡುವಂತೆ ಸ್ಥಳೀಯ ಪೊಲೀಸರನ್ನು ಕೋರಿದೆ ಎಂದು ಹೇಳಿದ್ದಾರೆ.
ಹಗರಣದಲ್ಲಿ ಭಾಗಿಯಾಗಿರುವ ಜಾಲದ ಮೇಲೆ ಜನವರಿಯಿಂದಲೇ ನಿಗಾ ಇಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 52 ಮಂದಿಯನ್ನು ಬಂಧಿಸಲಾಗಿದೆ ಎಂದು ಎಎಸ್‌ಪಿ (ದಕ್ಷಿಣ) ಅನುಕೃತಿ ಶರ್ಮಾ ಸುದ್ದಿಗಾರರಿಗೆ ತಿಳಿಸಿದರು. ಸುಮಾರು 50 ಆರೋಪಿಗಳು ತಲೆಮರೆಸಿಕೊಂಡಿದ್ದು, ಮೂವರು ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ ಎಂದು ಮಾಹಿತಿ ನೀಡಿದರು.
ವಂಚನೆ ಬಗ್ಗೆ ವಿವರ ನೀಡಿದ ಶರ್ಮಾ, ‘ವಂಚನೆ ಜಾಲದ ಸದಸ್ಯರು ಜೀವ ವಿಮೆ ಹಣ ಪಡೆಯಲು ಯುವಕರನ್ನು ಗುರಿಯಾಗಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ವಿಮೆ ಹಣಕ್ಕಾಗಿ ಕೊಲೆಯನ್ನೂ ಮಾಡಿದ್ದಾರೆ. ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ಮೃತ ವ್ಯಕ್ತಿಗಳ ಹೆಸರಿನಲ್ಲಿ ವಿಮೆ ಪಾಲಿಸಿಗಳನ್ನು ತೆಗೆದುಕೊಂಡು, ನಂತರ ದಾಖಲೆಗಳನ್ನು ತಿರುಚುವ ಮೂಲಕ ಆರೋಗ್ಯ ಮತ್ತು ಜೀವ ವಿಮಾ ಕಂಪನಿಗಳಿಂದ ಹಣ ಪಡೆಯಲು ಸಂಚು ರೂಪಿಸಿದ್ದಾರೆ’ ಎಂದರು.
ಈ ಹಗರಣವು ಕನಿಷ್ಠ 12 ರಾಜ್ಯಗಳಿಗೆ ವ್ಯಾಪಿಸಿದ್ದು, ಇದುವರೆಗೆ 17 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ ನಾಲ್ಕು ಎಫ್‌ಐಆರ್‌ಗಳು ಕೊಲೆಗೆ ಸಂಬಂಧಿಸಿದ್ದಾಗಿವೆ ಎಂದು ಹೇಳಿದರು.
‘ಕೊಲೆ ಪ್ರಕರಣಗಳಲ್ಲಿ, ವಿಮೆ ಹಣ ಪಡೆಯಲು ಅಪರಿಚಿತ ವಾಹನ ಡಿಕ್ಕಿಯಾಗಿ ಉಂಟಾದ ರಸ್ತೆ ಅಪಘಾತಗಳಿಂದ ಸಾವು ಸಂಭವಿಸಿದೆ ಎಂದು ಬಿಂಬಿಸಲಾಗಿದೆ. ಜಾಲವು ಬಳಸಿರುವ 29 ಮರಣ ಪ್ರಮಾಣಪತ್ರಗಳು ಸಂಪೂರ್ಣವಾಗಿ ನಕಲಿ ಎಂಬುದು ತನಿಖೆಯಿಂದ ಬಹಿರಂಗವಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.