ಸಾಂದರ್ಭಿಕ-ಚಿತ್ರ
ಎ.ಐ ಚಿತ್ರ
ಲಖನೌ: 2017ರ ಬಳಿಕ ಉತ್ತರ ಪ್ರದೇಶ ಪೊಲೀಸರು 15 ಸಾವಿರ ಎನ್‌ಕೌಂಟರ್‌ಗಳನ್ನು ನಡೆಸಿದ್ದು, 30 ಸಾವಿರಕ್ಕೂ ಅಧಿಕ ಕ್ರಿಮಿನಲ್‌ಗಳನ್ನು ಬಂಧಿಸಿದ್ದಾರೆ. 9 ಸಾವಿರ ಮಂದಿಯ ಕಾಲಿಗೆ ಗುಂಡು ಹಾರಿಸಲಾಗಿದ್ದು, 238 ಮಂದಿ ಕಾರ್ಯಾಚರಣೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪರಾಧಗಳನ್ನು ಮಟ್ಟಹಾಕಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿರ್ದೇನದ ಮೇರೆಗೆ ಇಲಾಖೆಯು ಕಠಿಣ ನಿಲುವು ತಾಳಿದೆ ಎಂದು ಪೊಲೀಸ್ ಮಹಾನಿರ್ದೇಶಕ ರಾಜೀವ್ ಕೃಷ್ಣ ಹೇಳಿದ್ದಾರೆ.
ಕಳೆದ 8 ವರ್ಷಗಳ ಅವಧಿಯಲ್ಲಿ 14,973 ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದ್ದು, 60,694 ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ. ಈ ಪೈಕಿ ಪೊಲೀಸರ ಮೇಲೆ ದಾಳಿ ನಡೆಸಿದ 9,467 ಮಂದಿಯ ಕಾಲಿಗೆ ಗುಂಡು ಹೊಡೆಯಲಾಗಿದೆ. 238 ಮಂದಿ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಕೃಷ್ಣ ಮಾಹಿತಿ ನೀಡಿದ್ದಾರೆ.
ರಾಜ್ಯದ ಪಶ್ಚಿಮ ಭಾಗದ ಮೇರಠ್ ವಲಯದಲ್ಲಿ ಹೆಚ್ಚಿನ ಕಾರ್ಯಾಚರಣೆ ನಡೆದಿದ್ದು, 7,969 ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ, 2,911 ಮಂದಿ ಗಾಯಗೊಂಡಿದ್ದಾರೆ. ಆಗ್ರಾ ವಲಯದಲ್ಲಿ 5,529 ಕ್ರಿಮಿನಲ್‌ಗಳನ್ನು ಬಂಧಿಸಲಾಗಿದ್ದರೆ, 741 ಮಂದಿ ಗಾಯಗೊಂಡಿದ್ದಾರೆ. ಬರೇಲಿ ವಲಯದಲ್ಲಿ 4,383 ಕ್ರಿಮಿನಲ್‌ಳನ್ನು ಬಂಧಿಸಲಾಗಿದ್ದು, 921 ಮಂದಿ ಗಾಯಗೊಂಡಿದ್ದಾರೆ. ವಾರಾಣಸಿ ವಲಯದಲ್ಲಿ ಬಂಧಿತರ ಹಾಗೂ ಗಾಯಗೊಂಡವರ ಸಂಖ್ಯೆ ಕ್ರಮವಾಗಿ 2,029 ಹಾಗೂ 620 ಇದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಕಮೀಷನರೇಟ್ ವ್ಯಾಪ್ತಿಯಲ್ಲಿ ಗಮನಿಸುವುದಾದದರೆ ಗೌತಮ ಬುದ್ಧನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ನಡೆದಿವೆ. ಅಲ್ಲಿ 1,983 ಮಂದಿಯ ಬಂಧನವಾಗಿದ್ದು, 1,180 ಮಂದಿಗೆ ಗಾಯಗಳಾಗಿವೆ. ಗಾಜಿಯಾಬಾದ್ ಕಮಿಷನರೇಟ್ ವ್ಯಾಪ್ತಿಯಲ್ಲಿ 1,133 ಮಂದಿಯನ್ನು ಬಂಧಿಸಲಾಗಿದ್ದರೆ, 686 ಮಂದಿ ಗಾಯಗೊಂಡಿದ್ದಾರೆ. ಆಗ್ರಾ ಕಮೀಷನರೇಟ್ ವ್ಯಾಪ್ತಿಯಲ್ಲಿ ಇದರ ಪ್ರಮಾಣದ ಕ್ರಮವಾಗಿ 1,060 ಹಾಗೂ 271 ಇದೆ ಎಂದು ಕೃಷ್ಣ ವಿವರಿಸಿದ್ದಾರೆ.
2017ರಲ್ಲಿ ಯೋಗಿ ಆಧಿತ್ಯನಾಥ ಅವರು ಅಧಿಕಾರ ವಹಿಸಿಕೊಂಡ ಬಳಿಕ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಕ್ರಿಮಿನಲ್‌ಗಳನ್ನು ನಿಯಂತ್ರಿಸುವುದು ಅವರ ಪ್ರಮುಖ ಆದ್ಯತೆಯಾಗಿತ್ತು. ಕ್ರಿಮಿನಲ್‌ಗಳಿಗೆ ಉತ್ತರ ಪ್ರದೇಶದಲ್ಲಿ ಜಾಗವಿಲ್ಲ. ಒಂದೋ ಅವರು ಸರಿದಾರಿಗೆ ಬರಬೇಕು, ಇಲ್ಲದಿದ್ದರೆ ಉತ್ತರ ಪ್ರದೇಶ ತೊರೆಯಬೇಕು ಎಂದು ಯೋಗಿ ಹೇಳಿದ್ದಾಗಿ ಕೃಷ್ಣ ಹೇಳಿದ್ದಾರೆ.
ಕಾನೂನು ಜಾರಿ ಬಲವರ್ಧನೆಗೆ ಸರ್ಕಾರವು ಅತ್ಯಾಧುನಿಕ ಶಸ್ತ್ರಗಳು ಹಾಗೂ ತರಬೇತಿ ಮೂಲಕ ಪೊಲೀಸ್ ಪಡೆಯನ್ನು ಬಲಿಷ್ಠಗೊಳಿಸಿದೆ. ಉತ್ತರ ಪ್ರದೇಶ ಈಗ ದೇಶದ ಸುರಕ್ಷಿತ ರಾಜ್ಯ ಎಂದು ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.