ADVERTISEMENT

ಬರೇಲಿ: ಕಾಂಗ್ರೆಸ್‌ ಅಭ್ಯರ್ಥಿ ಎಸ್‌ಪಿಗೆ ಸೇರ್ಪಡೆ, ಅದೇ ಕ್ಷೇತ್ರದಿಂದ ಸ್ಪರ್ಧೆ

ಪಿಟಿಐ
Published 22 ಜನವರಿ 2022, 16:38 IST
Last Updated 22 ಜನವರಿ 2022, 16:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಮಹಿಳಾ ಪ್ರಾತಿನಿಧ್ಯದ ಅಡಿಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದಿದ್ದ ಅಭ್ಯರ್ಥಿಯೊಬ್ಬರು ಸಮಾಜವಾದಿ ಪಕ್ಷ ಸೇರ್ಪಡೆಗೊಂಡಿದ್ದು, ಅದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಗೆ ಬರೇಲಿ ಕಂಟೋನ್ಮೆಂಟ್‌ ಕ್ಷೇತ್ರದಿಂದ ಸ್ಪರ್ಧಿಸಲು ಸುಪ್ರಿಯಾ ಏರನ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಿಸಿತ್ತು. ಇದೀಗ ಎಸ್‌ಪಿಗೆ ಸೇರ್ಪಡೆಗೊಂಡಿರುವ ಸುಪ್ರಿಯಾ ಏರನ್‌ ಅವರಿಗೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಲಾಗಿದೆ.

ಬರೇಲಿಯ ಮಾಜಿ ಮೇಯರ್‌ ಆಗಿರುವ ಸುಪ್ರಿಯಾ ಅವರು ಪತಿಹಾಗೂ ಕಾಂಗ್ರೆಸ್‌ನ ಮಾಜಿ ಸಂಸದ ಪ್ರವೀಣ್‌ ಸಿಂಗ್‌ ಏರನ್‌ ಅವರ ಜೊತೆಗೆ ಶನಿವಾರ ಅಖಿಲೇಶ್‌ ಯಾದವ್‌ ನೇತೃತ್ವದ ಎಸ್‌ಪಿ ಸೇರ್ಪಡೆಗೊಂಡರು. ಈಗಾಗಲೇ ಬರೇಲಿ ಕಂಟೋನ್ಮೆಂಟ್‌ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದ ರಾಜೇಶ್‌ ಅಗರ್‌ವಾಲ್‌ ಅವರ ಹೆಸರನ್ನು ಕೈಬಿಟ್ಟಿರುವ ಎಸ್‌ಪಿ ಸುಪ್ರಿಯಾ ಏರನ್ ಅವರಿಗೆ ಮಣೆ ಹಾಕಿದೆ.

ADVERTISEMENT

ಜನವರಿ 13ರಂದು ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಸುಪ್ರಿಯಾ ಏರನ್‌ ಅವರ ಹೆಸರಿದ್ದ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ಕಾಂಗ್ರೆಸ್‌ ಟಿಕೆಟ್‌ ಪಡೆದ 50 ಮಹಿಳೆಯರ ಪೈಕಿ ಸುಪ್ರಿಯಾ ಅವರು ಒಬ್ಬರಾಗಿದ್ದರು. 2012ರಲ್ಲಿ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತಿದ್ದರು.

‘ನಾನು ಹುಡುಗಿ, ಹೋರಾಡಬಲ್ಲೆ’ ಎಂಬ ಘೋಷಣೆಯ ಅಡಿಯಲ್ಲಿ, ಬರೇಲಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಸುಪ್ರಿಯಾ ಅವರು ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅಲ್ಲಿನ ಘಟನೆಯನ್ನು ವೈಷ್ಣೋದೇವಿಯಲ್ಲಿ ನಡೆದ ಕಾಲ್ತುಳಿತಕ್ಕೆ ಹೋಲಿಸಿ ಅವರು ನೀಡಿದ್ದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.