ಸಂಜಯ್ ಸಿಂಗ್
ಪಿಟಿಐ ಚಿತ್ರ
ಲಖನೌ: ಉತ್ತರ ಪ್ರದೇಶದ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಮಂಗಳವಾರ ಆರೋಪಿಸಿದ್ದು, ಮಹೋಬಾ ಜಿಲ್ಲೆಯ ಒಂದೇ ಮನೆಯಲ್ಲಿ 4,271 ಮತದಾರರ ಹೆಸರು ಮತಪಟ್ಟಿಯಲ್ಲಿ ದಾಖಲಾಗಿದೆ ಎಂದು ಹೇಳಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ನಿನ್ನೆ ಮಹೋಬಾದಲ್ಲಿನ ಎರಡು ಮನೆಗಳ ಬಗ್ಗೆ ನಾನು ನಿಮಗೆ ಹೇಳಿದ್ದೆ, ಅಲ್ಲಿ 243 ಮತ್ತು 185 ಮತದಾರರು ಕಂಡುಬಂದಿದ್ದರು. ಇಂದು ಒಂದೇ ಮನೆಯಲ್ಲಿ 4,271 ಮತದಾರರು ನೋಂದಾಯಿಸಲ್ಪಟ್ಟಿರುವ ಮತ್ತೊಂದು ಪ್ರಕರಣವನ್ನು ನಾನು ಕಂಡುಹಿಡಿದಿದ್ದೇನೆ. ಒಂದು ಮನೆಯಲ್ಲಿ 4,271 ಮತಗಳಿದ್ದರೆ, ಆ ಕುಟುಂಬವು ಸುಮಾರು 12,000 ಸದಸ್ಯರನ್ನು ಹೊಂದಿರಬೇಕು. ಆ ದೊಡ್ಡ ಕುಟುಂಬ ಎಲ್ಲಿದೆ ಎಂಬುವುದನ್ನು ಹುಡುಕಬೇಕು ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗದ ಪಿತೂರಿಯಿಂದ ಮತ ಕಳ್ಳತನ ಪ್ರಾರಂಭವಾಯಿತು ಎಂದು ಸಿಂಗ್ ಆರೋಪಿಸಿದ್ದಾರೆ.
ಈ ಮನೆಯ ಮಾಲೀಕರು (ಮಹೋಬಾದಲ್ಲಿ) ಗ್ರಾಮ ಪ್ರಧಾನ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅವರೇ ಗೆಲ್ಲುತ್ತಾರೆ. ಅವರ ಮನೆಯವರು ಮತ ಚಲಾಯಿಸಿದರೆ ಸಾಕು. ಬೇರೆ ಯಾರೂ ಮತ ಚಲಾಯಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಬಿಹಾರದ ಭಾಗಲ್ಪುರದಲ್ಲಿ ಭೂ ಹಂಚಿಕೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ-ಜೆಡಿಯು ಮೈತ್ರಿಕೂಟವನ್ನು ತರಾಟೆಗೆ ತೆಗೆದುಕೊಂಡ ಅವರು, ರಾಜ್ಯ ಸರ್ಕಾರವು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಸಮೂಹ ಸಂಸ್ಥೆಗೆ ಮೂರು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಎಕರೆಗೆ ₹1ರೂ. ನಂತೆ ನಾಮಮಾತ್ರ ಬೆಲೆಗೆ 25 ವರ್ಷಗಳಿಗೆ 1,050 ಎಕರೆ ಭೂಮಿಯನ್ನು ನೀಡಿದೆ ಎಂದು ಆರೋಪಿಸಿದರು.
’₹1 ಗೆ ಭೂಮಿಯನ್ನು ನೀಡುವುದು ಮಾತ್ರವಲ್ಲದೆ, ಅಲ್ಲಿ ಉತ್ಪಾದಿಸುವ ವಿದ್ಯುತ್ ಅನ್ನು ಮುಂದಿನ 25 ವರ್ಷಗಳವರೆಗೆ ಯೂನಿಟ್‌ಗೆ ₹7ಗೆ ಖರೀದಿಸಲಾಗುವುದು ಎಂಬ ಖಾತರಿಯನ್ನು ಸಹ ನೀಡಲಾಗಿದೆ. ಜನರು ಯೂನಿಟ್‌ಗೆ ₹10, ₹11 ಅಥವಾ ₹12 ನೀಡಿ ವಿದ್ಯುತ್ ಖರೀದಿಸುತ್ತಾರೆಯೇ ಎಂಬುದು ಸರ್ಕಾರಕ್ಕೆ ಮುಖ್ಯವಲ್ಲ. ಆದರೆ, ಪ್ರಧಾನ ಮಂತ್ರಿಯ ಸ್ನೇಹಿತ ಯಾವುದೇ ತೊಂದರೆಯನ್ನು ಎದುರಿಸಬಾರದು’ಎಂದು ಸಿಂಗ್ ಕುಟುಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.