ADVERTISEMENT

ಕಾಶ್ಮೀರ: ಪೊಲೀಸ್‌ ಇಲಾಖೆ ಆಧುನೀಕರಣಕ್ಕೆ ₹1000 ಕೋಟಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 18:23 IST
Last Updated 19 ಅಕ್ಟೋಬರ್ 2019, 18:23 IST
   

ಶ್ರೀನಗರ: ಗುಂಡು ನಿರೋಧಕ (ಬುಲೆಟ್‌ಪ್ರೂಫ್‌) ಅತ್ಯಾಧುನಿಕ ವಾಹನ, ಬುಲೆಟ್‌ಪ್ರೂಫ್‌ ಜಾಕೆಟ್‌ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಗಾಗಿ ಜಮ್ಮು ಕಾಶ್ಮೀರ ಪೊಲೀಸ್‌ ಇಲಾಖೆಗೆ ಕೇಂದ್ರ ಸರ್ಕಾರ ₹ 1000 ಕೋಟಿ ಅನುದಾನ ಮಂಜೂರು ಮಾಡಿದೆ.

‘ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಉಪಸ್ಥಿತಿಯಲ್ಲಿ ಇತ್ತೀಚೆಗೆ ದೆಹಲಿಯಲ್ಲಿ ನಡೆದಿದ್ದ ಭದ್ರತೆ ಪರಿಶೀಲನಾ ಸಭೆಯಲ್ಲಿ ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಪೊಲೀಸ್‌ ಇಲಾಖೆಯನ್ನು ಆಧುನೀಕರಣಗೊಳಿಸುವ ತೀರ್ಮಾನ ಕೈಗೊಳ್ಳಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದಕರ ಜೊತೆ ಸಂಘರ್ಷ ನಡೆದಾಗ ಸಂಭವಿಸಬಹುದಾದ ಗಾಯಗಳಿಗೆ ತುರ್ತು ಚಿಕಿತ್ಸೆ ನೀಡಲು ಸಾಧ್ಯವಾಗುವಂಥ ಪ್ರಥಮ ಚಿಕಿತ್ಸಾ ವ್ಯವಸ್ಥೆ ಇರುವ, ಜಿಪಿಎಸ್‌ ವ್ಯವಸ್ಥೆಯನ್ನು ಹೊಂದಿರುವ 50 ಅತ್ಯಾಧುನಿಕ ವಾಹನಗಳನ್ನು ಆರಂಭದಲ್ಲಿ ಖರೀದಿಸಲಾಗುವುದು. ಜೊತೆಗೆ, ಸ್ವಯಂಚಾಲಿತ ರೈಫಲ್‌ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಗುಂಡುನಿರೋಧಕ ಜಾಕೆಟ್‌ಗಳನ್ನು ಸಹ ಪೊಲೀಸರಿಗೆ ಒದಗಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಪೊಲೀಸ್‌ ಸಿಬ್ಬಂದಿಯನ್ನು ಸಣ್ಣ ತಂಡಗಳಾಗಿ ವಿಂಗಡಿಸಿ, ರಾಜ್ಯದಿಂದ ಹೊರಗೆ ಕರೆದೊಯ್ದು ಅವರಿಗೆ ವಿಶೇಷ ತರಬೇತಿ ನೀಡಲು ಸಹ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂಥ ತರಬೇತಿಗಳನ್ನು ಜಮ್ಮು ಕಾಶ್ಮೀರದಲ್ಲೇ ನಡೆಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಹಜ ಸ್ಥಿತಿಗೆ ಮರಳದ ಕಣಿವೆ

ಶುಕ್ರವಾರ ಪ್ರಾರ್ಥನೆಯ ಸಲುವಾಗಿ ಶ್ರೀನಗರದ ಕೆಲವು ಭಾಗಗಳಲ್ಲಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಶನಿವಾರ ಸಡಿಲಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಆರ್‌ಪಿಸಿ 144ರ ಸೆಕ್ಷನ್‌ ಅಡಿಯಲ್ಲಿ, ಸೌರಾ ಪೊಲೀಸ್‌ ಠಾಣೆ ವ್ಯಾಪ್ತಿಯ ಅಂಚಾರ್‌ ಪ್ರದೇಶ ಮತ್ತು ನೌಹಟ್ಟಾ ಪೊಲೀಸ್‌ ಠಾಣಾ ವ್ಯಾಪ್ತಿಯ ಜಾಮಿಯಾ ಮಸೀದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಬೆಳಿಗ್ಗೆ ನಿರ್ಬಂಧ ವಿಧಿಸಲಾಗಿತ್ತು. ಇಲ್ಲಿನ ಜಾಮಿಯಾ ಮಸೀದಿಯಲ್ಲಿ ಕಳೆದ 2 ತಿಂಗಳಿನಿಂದ ಪ್ರಾರ್ಥನೆಗೆ ಅನುಮತಿ ನೀಡಿಲ್ಲ.

ಪ್ರತಿಭಟನೆಗೆ ನಿಷೇಧ: ಕಾಶ್ಮೀರ ಕಣಿವೆಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುವವರೆಗೆ ಮತ್ತು ನಿರ್ಬಂಧಗಳನ್ನು ಸಂಪೂರ್ಣವಾಗಿ ಸಡಿಲಿಸುವವರೆಗೆ ಎಲ್ಲಾ ಬಗೆಯ ಪ್ರತಿಭಟನೆ ಮತ್ತು ಧರಣಿಗಳನ್ನು ನಿಷೇಧಿಸಲಾಗಿದೆ ಎಂದು ಕಾಶ್ಮೀರದ ಹಿರಿಯ ಪೊಲೀಸ್‌ ಅಧಿಕಾರಿ ದಿಲ್‌ಭಾಗ್‌ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.