
ಆಗ್ರಾ: ಉತ್ತರ ಪ್ರದೇಶದಲ್ಲಿ ಬೃಹತ್ ಗೋಶಾಲೆ ಆರಂಭಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನಾ ಮತ್ತು ಹೈನುಗಾರಿಕೆ ರಾಜ್ಯ ಖಾತೆ ಸಚಿವ ಸಂಜೀವ್ ಬಲ್ಯಾನ್ ಹೇಳಿದ್ದಾರೆ.
ಮುಜಾಫರ್‌ನಗರದ ಸೊಲನಿ ನದಿ ತಟದ ಚಂದನ ಗ್ರಾಮದ ಸುಮಾರು 200 ಎಕರೆ (800 ಬಿಗಾ) ವ್ಯಾಪ್ತಿಯಲ್ಲಿ ಉದ್ದೇಶಿತ ಗೋಶಾಲೆ ನಿರ್ಮಾಣಗೊಳ್ಳಲಿದೆ. ₹70 ಕೋಟಿ ವೆಚ್ಚದಲ್ಲಿ ಗೋಶಾಲೆ 5000 ಗೋವುಗಳಿಗೆ ಆಸರೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ 6 ತಿಂಗಳಲ್ಲಿ ಗೋಶಾಲೆ ಪೂರ್ಣಗೊಳ್ಳಲಿದ್ದು, ಬಳಿಕ ಜಿಲ್ಲೆಯಲ್ಲಿ ಬಿಡಾಡಿ ದನಗಳು ಕಾಣಿಸುವುದಿಲ್ಲ. ಯೋಜನೆಗಾಗಿ ಚಾಲನಾ ಸಮಿತಿ ರಚಿಸಲಾಗುವುದು. ಗೋಶಾಲೆ ಆವರಣದಲ್ಲಿ ಪಶು ಅಂತ್ಯಸಂಸ್ಕಾರ ವ್ಯವಸ್ಥೆ ಕೂಡ ಇರಲಿದೆ. ನೀರಿನ ಟ್ಯಾಂಕ್, ಆಹಾರ ಸಂಗ್ರಹಣೆ ಸೌಲಭ್ಯಗಳನ್ನು ಕೂಡ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಯೋಜನೆಗಾಗಿ ಜಾಗ ಗುರುತಿಸಲಾಗಿದೆ. ಶೀಘ್ರದಲ್ಲಿ ಯೋಜನೆಯ ರೂಪುರೇಷೆಯನ್ನು ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈ ಭಾಗದಲ್ಲಿ ಎತ್ತು ಹಾಯ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಇದು ಸ್ಥಳೀಯರ ಪ್ರತಿಭಟನೆಗೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಸಚಿವರ ಹೇಳಿಕೆ ಹೊರಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.