ADVERTISEMENT

UPSC Results: ಶಕ್ತಿ ದುಬೆಗೆ ಪ್ರಥಮ ರ‍್ಯಾಂಕ್; 1009 ಅಭ್ಯರ್ಥಿಗಳು ಆಯ್ಕೆ

ಪಿಟಿಐ
Published 22 ಏಪ್ರಿಲ್ 2025, 11:25 IST
Last Updated 22 ಏಪ್ರಿಲ್ 2025, 11:25 IST
<div class="paragraphs"><p>ಶಕ್ತಿ ದುಬೆ, ಹರ್ಷಿತಾ ಗೋಯಲ್,&nbsp;</p></div>

ಶಕ್ತಿ ದುಬೆ, ಹರ್ಷಿತಾ ಗೋಯಲ್, 

   

ಎಕ್ಸ್ ಚಿತ್ರ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು 2024ರಲ್ಲಿ ನಡೆಸಿದ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಶಕ್ತಿ ದುಬೆ ದೇಶಕ್ಕೆ ಮೊದಲಿಗರಾಗಿದ್ದಾರೆ.

ADVERTISEMENT

ಅಲಹಾಬಾದ್ ವಿಶ್ವವಿದ್ಯಾಲಯದಿಂದ ಜೀವರಸಾಯನ ವಿಜ್ಞಾನದಲ್ಲಿ ಪದವಿ ಪಡೆದಿರುವ ದುಬೆ, ಲೋಕಸೇವಾ ಆಯೋಗದ ಪರೀಕ್ಷೆಗೆ ರಾಜಕೀಯ ವಿಜ್ಞಾನ ಮತ್ತು ಅಂತರರಾಷ್ಟ್ರೀಯ ವ್ಯವಹಾರ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಆಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬರೊಡಾದ ಎಂಎಸ್ ವಿಶ್ವವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದಿರುವ ಹರ್ಷಿತಾ ಗೋಯಲ್ ಅವರು 2ನೇ ರ‍್ಯಾಂಕ್‌ ಪಡೆದಿದ್ದಾರೆ. ಇವರೂ ರಾಜಕೀಯ ವಿಜ್ಞಾನ ಮತ್ತು ಅಂತರರಾಷ್ಟ್ರೀಯ ವ್ಯವಹಾರ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರು.

ವೆಲ್ಲೋರ್‌ನ ವಿಐಟಿ ಕಾಲೇಜಿನಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಬಿ.ಟೆಕ್. ಎಂಜಿನಿಯರಿಂಗ್ ಪದವಿ ಪಡೆದಿರುವ ಡೊಂಗ್ರೆ ಅರ್ಚಿತ್ ಪರಾಗ್ ಅವರು ಮೂರನೇ ರ‍್ಯಾಂಕ್ ಪಡೆದಿದ್ದು, ತತ್ವಶಾಸ್ತ್ರವನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಿಕೊಂಡಿದ್ದರು. 

ಅಹಮದಾಬಾದ್‌ನಲ್ಲಿರುವ ಗುಜರಾತ್ ಟೆಕ್ನಲಾಜಿಕಲ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ ಪಡೆದಿರುವ ಶಾ ಮಾರ್ಗಿ ಚಿರಾಗ್‌ 4ನೇ ರ‍್ಯಾಂಕ್ ಪಡೆದಿದ್ದಾರೆ. ಸಮಾಜವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡಿದ್ದರು.

5ನೇ ರ‍್ಯಾಂಕ್ ಪಡೆದ ಆಕಾಶ್ ಗರ್ಗ್ ಅವರು ದೆಹಲಿಯ ಗುರು ಗೋವಿಂದ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್. ಪದವಿ ಪಡೆದಿದ್ದಾರೆ. ಇವರೂ ಸಮಾಜವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರು.

ಮೊದಲು ಐದು ರ‍್ಯಾಂಕ್‌ಗಳಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಇದ್ದಾರೆ. 

2024ರ ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯು ಜೂನ್ 16ರಂದು ನಡೆದಿತ್ತು. 9,92,599 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 5,83,213 ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದರು.

ಮುಖ್ಯ ಪರೀಕ್ಷೆಗೆ 14,627 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಇವರಲ್ಲಿ 2,845 ಅಭ್ಯರ್ಥಿಗಳು ಸಂದರ್ಶನ ಹಂತಕ್ಕೆ ಆಯ್ಕೆಯಾಗಿದ್ದರು. ಐಎಎಸ್, ಐಎಫ್‌ಎಸ್, ಐಪಿಎಸ್ ಸೇರಿದಂತೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯ ವಿವಿಧ ಹುದ್ದೆಗಳಿಗೆ ಅಂತಿಮವಾಗಿ 1,009 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಇವರಲ್ಲಿ 725 ಪುರುಷರು ಹಾಗೂ 284 ಮಹಿಳೆಯರು ಸೇರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.