ADVERTISEMENT

‘ಯುಪಿಎಸ್‌ಸಿ ಜಿಹಾದ್ | ಸಮುದಾಯಕ್ಕೆ ಮಸಿ: ‍ಪರಿಹಾರ ‘ಸುದರ್ಶನ ನ್ಯೂಸ್‌’ ಹೊಣೆ

‘ಯುಪಿಎಸ್‌ಸಿ ಜಿಹಾದ್‌’ ಕಾರ್ಯಕ್ರಮ l ನಿಷೇಧವು ಕಟ್ಟಕಡೆಯ ಪರಿಹಾರ: ಸುಪ್ರೀಂಕೋರ್ಟ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 19:31 IST
Last Updated 18 ಸೆಪ್ಟೆಂಬರ್ 2020, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೇಂದ್ರ ನಾಗರಿಕ ಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಮುಸ್ಲಿಮರು ನುಸುಳುತ್ತಿದ್ದಾರೆ ಎಂದು ಆರೋಪಿಸಿ ‘ಸುದರ್ಶನ ನ್ಯೂಸ್‌’ ಸುದ್ದಿ ವಾಹಿನಿ ಬಿತ್ತರಿಸಿದ ಕಾರ್ಯಕ್ರಮದ ಉಳಿದ ಭಾಗಗಳ ಪ್ರಸಾರಕ್ಕೆ ತಡೆ ನೀಡಿದ ಎರಡು ದಿನಗಳ ಬಳಿಕ ಸುಪ್ರೀಂ ಕೋರ್ಟ್‌ ತನ್ನ ನಿಲುವನ್ನು ತುಸು ಮೃದುಗೊಳಿಸಿದೆ. ಪ್ರಸಾರಕ್ಕೆ ಮುಂಚೆಯೇ ನಿಷೇಧ ಹೇರುವ ಆದೇಶವು ‘ಕಟ್ಟಕಡೆಯ ಪರಿಹಾರ’, ಇದು ಅಣ್ವಸ್ತ್ರ ಇದ್ದಂತೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಆದರೆ, ಸಿದ್ಧ ಮಾದರಿಗಳು, ಹುಸಿ ಹೇಳಿಕೆಗಳು, ಭಾವನೆಗೆ ಧಕ್ಕೆ ತರುವ ಮೂಲಕ ಒಂದಿಡೀ ಸಮುದಾಯಕ್ಕೆ ಮಸಿ ಬಳಿಯಲಾಗುತ್ತಿದೆ ಎಂಬ ತನ್ನ ಕಳವಳಕ್ಕೆ ‘ಸುದರ್ಶನ ನ್ಯೂಸ್‌’ ಸ್ವಯಂಪ್ರೇರಿತವಾಗಿ ಪರಿಹಾರ ಒದಗಿಸಬೇಕು ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಮೂವರು ಸದಸ್ಯರ ಪೀಠವು ಹೇಳಿದೆ.

ತುರ್ತು‍ಪರಿಸ್ಥಿತಿಯ ಅವಧಿಯಲ್ಲಿ ಏನಾಗಿದೆ ಎಂಬುದು ತಿಳಿದಿದೆ, ಹಾಗಾಗಿ ವಾಕ್‌ ಮತ್ತು ಚಿಂತನಾ ಸ್ವಾತಂತ್ರ್ಯದ ಖಾತರಿ ನೀಡಲಾಗುವುದು ಎಂದು ಪೀಠ ಸ್ಪಷ್ಟಪಡಿಸಿದೆ.

ADVERTISEMENT

ಸುದ್ದಿ ಪ್ರಸಾರ ಸಂಸ್ಥೆಗಳ ಸ್ವಯಂ ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರವು ಏನು ಕ್ರಮ ಕೈಗೊಳ್ಳಲಿದೆ ಎಂದೂ ಪೀಠವು ಪ್ರಶ್ನಿಸಿದೆ.

‘ಸುದರ್ಶನ ನ್ಯೂಸ್‌’ನ ಮುಖ್ಯ ಸಂಪಾದಕ ಸುರೇಶ್‌ ಚವ್ಹಾಣ್ಕೆ ಸಲ್ಲಿಸಿದ ಸುದೀರ್ಘ ಪ್ರಮಾಣಪತ್ರವನ್ನು ಅವರ ಪರ ವಕೀಲ ಶ್ಯಾಮ್‌ ದಿವಾನ್‌ ಪೀಠದ ಗಮನಕ್ಕೆ ತಂದರು. ತಮ್ಮ ಪತ್ರಿಕಾ ಸ್ವಾತಂತ್ರ್ಯವನ್ನು ಬಳಸಿಕೊಂಡು ತನಿಖಾ ವರದಿಯ ಸರಣಿ ಸಿದ್ಧಪಡಿಸಿರುವುದಾಗಿ ಈ ಪ್ರಮಾಣಪತ್ರದಲ್ಲಿ ಸುರೇಶ್‌ ವಿವರಿಸಿದ್ದಾರೆ.

ದಿವಾನ್‌ ಅವರ ವಾದವನ್ನು ಪೀಠವು ಒಪ್ಪಿತು. ಆದರೆ, ‘ಮಾಧ್ಯಮ ಸ್ವಾತಂತ್ರ್ಯವನ್ನು ನಾವು ಗೌರವಿಸುತ್ತೇವೆ. ಯಾವುದೇ ಒಂದು ಸಮುದಾಯವನ್ನು ಗುರಿ ಮಾಡಿಕೊಳ್ಳಬಾರದು ಎಂಬ ಸಂದೇಶವು ಮಾಧ್ಯಮಕ್ಕೆ ತಲುಪಲಿ. ನಾವು ಒಂದು ಸುಸಂಬದ್ಧ ದೇಶವಾಗಿ ಉಳಿಯಬೇಕು, ಯಾವುದೇ ಒಂದು ಸಮುದಾಯದ ವಿರುದ್ಧ ಇರಬಾರದು’ ಎಂದು ಪೀಠವು ಹೇಳಿತು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆ ಆಗಲು ಮುಸ್ಲಿಂ ಅಭ್ಯರ್ಥಿಗಳಿಗೆ ನೆರವು ನೀಡುತ್ತಿರುವ ಝಕಾತ್‌ ಫೌಂಡೇಶನ್,‌ ಭಯೋತ್ಪಾದನಾ ಸಂಘಟನೆಗಳ ಜತೆಗೆ ನಂಟು ಇರುವ ಸಂಸ್ಥೆಗಳಿಂದ ದೇಣಿಗೆ ಪಡೆದಿದೆ ಎಂಬುದನ್ನು ಸಮರ್ಥಿಸುವ ದಾಖಲೆಗಳನ್ನು ದಿವಾನ್‌ ಅವರು ಉಲ್ಲೇಖಿಸಿದ್ದಾರೆ.

ಒಂದು ಎನ್‌ಜಿಒ ಮತ್ತು ಅದಕ್ಕೆ ಬಂದ ದೇಣಿಗೆಗಳ ಬಗ್ಗೆ ವರದಿ ಮಾಡಿದರೆ ನಮ್ಮ ತಕರಾರೇನೂ ಇಲ್ಲ. ಆದರೆ, ಅಧಿಕಾರಶಾಹಿಗೆ
ನುಸುಳಿಕೊಳ್ಳುತ್ತಿದೆ ಎಂದು ಒಂದಿಡೀ ಸಮುದಾಯವನ್ನು ಬೊಟ್ಟು ಮಾಡುವುದು, ಅದಕ್ಕಾಗಿ ಕೆಲವು ಸಿದ್ಧ ಮಾದರಿಗಳನ್ನು ತೋರಿಸುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಸೆನ್ಸಾರ್‌ ಮಂಡಳಿ ಅಲ್ಲ

‘ನಾವು ಸೆನ್ಸಾರ್‌ ಮಂಡಲಿ ಅಲ್ಲ. ಸೆನ್ಸಾರ್‌ ಮಾಡುವ ಇಚ್ಛೆಯೂ ನಮಗೆ ಇಲ್ಲ. ನಮ್ಮ ಕಳವಳಗಳನ್ನು ಹೇಗೆ ಪರಿಹರಿಸಲಾಗುವುದು ಎಂಬುದನ್ನು ನಿಮ್ಮ ಕಕ್ಷಿಗಾರರು ತಿಳಿಸಲಿ’ ಎಂದು ಪೀಠವು ಸೂಚಿಸಿತು.

‘ನಾಗರಿಕ ಸೇವೆಗಳು ಎಂದು ಹೇಳಿದಾಗಲೆಲ್ಲ ನೀವು ಐಎಸ್‌ಐಯನ್ನೂ ಉಲ್ಲೇಖಿಸಿದ್ದೀರಿ. ಇದು ಗಂಭೀರ ಕಳವಳದ ವಿಚಾರ. ಮುಸ್ಲಿಮರು ಷಡ್ಯಂತ್ರ ಮಾಡಿದ್ದಾರೆ ಎಂದು ತೋರಿಸಲು ನೀವು ಯತ್ನಿಸಿದ್ದೀರಿ’ ಎಂದೂ ಪೀಠ ಹೇಳಿದೆ.

‘ನಿಮ್ಮ ಕಾರ್ಯಕ್ರಮವು ಈ ಸಮುದಾಯಕ್ಕೆ ಭಾರಿ ಅಗೌರವ ತೋರಿದೆ. ಪ್ರತಿಯೊಬ್ಬರೂ ಅಧಿಕಾರ ಕೇಂದ್ರದಲ್ಲಿ ಇರಲು ಬಯಸುತ್ತಾರೆ. ಮುಖ್ಯವಾಹಿನಿಗೆ ಕರೆತರಬೇಕಾದವರನ್ನು ಅಂಚಿಗೆ ತಳ್ಳುವ ಕೆಲಸವನ್ನು ನೀವು ಮಾಡಿದ್ದೀರಿ. ಹೀಗೆ ಮಾಡುವ ಮೂಲಕ ಅವರನ್ನು ನೀವು ತಪ್ಪು ಹಾದಿಗೆ ಎಳೆಯಲು ಯತ್ನಿಸಿದ್ದೀರಿ, ನಾವು ಎಲ್ಲಿಗೆ ಸಾಗುತ್ತಿದ್ದೇವೆ’ ಎಂದು ನ್ಯಾಯಮೂರ್ತಿ ಕೆ.ಎಂ.‌ ಜೋಸೆಫ್‌ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.