ADVERTISEMENT

ಸಚಿನ್ ಟ್ವೀಟ್ ಬಗ್ಗೆ ಅಸಮಾಧಾನ; ಶರಪೋವಾ ಕ್ಷಮೆಯಾಚಿಸಿದ ಕೇರಳದ ನೆಟ್ಟಿಗರು

ಪಿಟಿಐ
Published 5 ಫೆಬ್ರುವರಿ 2021, 4:13 IST
Last Updated 5 ಫೆಬ್ರುವರಿ 2021, 4:13 IST
   

ತಿರುವನಂತಪುರ: ರೈತರ ಪ್ರತಿಭಟನೆಯ ಕುರಿತು ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಮಾಡಿರುವ ಟ್ವೀಟ್ ಬಗ್ಗೆ ಅಸಮಾಧಾನಗೊಂಡಿರುವ ಕೇರಳದ ನೆಟ್ಟಿಗರು, ರಷ್ಯಾದ ಟೆನಿಸ್ ತಾರೆ ಮರಿಯಾ ಶರಪೋವಾ ಅವರ ಸಾಮಾಜಿಕ ಪುಟಗಳಲ್ಲಿ ಕ್ಷಮೆಯಾಚನೆ ನಡೆಸಿದ್ದಾರೆ.

2015ನೇ ಇಸವಿಯಲ್ಲಿ ಸಂದರ್ಶನವೊಂದರಲ್ಲಿ ತಮಗೆ ಸಚಿನ್ ತೆಂಡೂಲ್ಕರ್ ಅಂದರೆ ಯಾರೆಂದು ಗೊತ್ತಿಲ್ಲ ಎಂದು ರಷ್ಯಾದ ಮರಿಯಾ ಶರಪೋವಾ ಅಭಿಪ್ರಾಯಪಟ್ಟಿದ್ದರು.

ಇದರ ವಿರುದ್ಧ ಆಕ್ರೋಶಗೊಂಡಿದ್ದ ಕ್ರಿಕೆಟ್ ಅಭಿಮಾನಿಗಳು ವಿಶೇಷವಾಗಿಯೂ ಮಲಯಾಳಂ ನೆಟ್ಟಿಗರು, ಶರಪೋವಾ ಸಾಮಾಜಿಕ ಖಾತೆಗಳಲ್ಲಿ ಟ್ರೋಲ್ ಅಭಿಷೇಕವನ್ನು ನಡೆಸಿದ್ದರು.

ADVERTISEMENT

ಆದರೆ ಇದೀಗ ರೈತರ ಪ್ರತಿಭಟನೆ ಸಂಬಂಧ ಸಚಿನ್ ತೆಂಡೂಲ್ಕರ್ ನಡೆಸಿರುವ ಟ್ವೀಟ್‌ನಿಂದ ಅಸಮಾಧಾನಗೊಂಡಿರುವ ಮಲಯಾಳಿಗರು, ಶರಪೋವಾ ವಿರುದ್ಧ ತಮ್ಮ ವರ್ತನೆಗಾಗಿ ಕ್ಷಮೆಯಾಚನೆ ನಡೆಸಿದ್ದಾರೆ.

ಕ್ಷಮಿಸಿ. ಮರಿಯಾ ಲೆಜೆಂಡ್. ನಾವು ಸಚಿನ್ ಅವರನ್ನು ಓರ್ವ ಆಟಗಾರನಾಗಿ ಮಾತ್ರ ತಿಳಿದುಕೊಂಡಿದ್ದೇವೆ. ಆದರೆ ಓರ್ವ ವ್ಯಕ್ತಿಯಾಗಿ ತಿಳಿದಿಲ್ಲ. ನಿಮ್ಮ ಖಾತೆಯಲ್ಲಿ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಕ್ಷಮಿಸಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಕೆಲವರು ರಷ್ಯಾದ ತಾರೆ ದೇವರ ಸ್ವಂತ ನಾಡು ಕೇರಳಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದು, ಜನಪ್ರಿಯ ತ್ರಿಶೂರ್ ಪೂರಂನಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

ಶರಪೋವಾ ನೀವು ಸಚಿನ್ ಬಗ್ಗೆ ಸರಿಯಾಗಿ ಹೇಳಿದ್ದೀರಿ. ನಿಮಗೆ ಗೊತ್ತಿರಬೇಕಾದಷ್ಟು ಗುಣವಂತದ ವ್ಯಕ್ತಿ ಅವರಲ್ಲ ಎಂದು ಕೇರಳದ ಸಾಮಾಜಿಕ ಬಳಕೆದಾರರೊಬ್ಬರು ಮಲಯಾಳಂನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಸಾಮಾಜಿಕ ವೈಯಕ್ತಿಕ ಖಾತೆಗಳು ಕಾಮೆಂಟ್‌ಗಳಿಂದ ತುಂಬಿ ಹೋಗಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮರಿಯಾ ಶರಪೋವಾ, ಯಾರಾದರೂ ವರ್ಷದ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಈ ಮೊದಲು ರೈತರ ಪ್ರತಿಭಟನೆ ಸಂಬಂಧ ಅಮೆರಿಕದ ಪಾಪ್ ಗಾಯಕಿ ರಿಯಾನಾ ಟ್ವೀಟ್ ಮಾಡಿದ್ದರು. ಆದರೆ ಭಾರತೀಯ ಆಂತರಿಕ ವಿಷಯಗಳಲ್ಲಿ ವಿದೇಶಿಯರು ಕಾಮೆಂಟ್ ಮಾಡುವುದರ ಬಗ್ಗೆ ಸಚಿನ್ ತೆಂಡೂಲ್ಕರ್ ಧ್ವನಿ ಎತ್ತಿದ್ದರು.

ಭಾರತದ ಸೌರ್ವಭಾಮತ್ವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗದು. ವಿದೇಶಿ ಶಕ್ತಿಗಳು ಪ್ರೇಕ್ಷಕರಾಗಬಹುದೇ ವಿನಹ ದೇಶದ ಒಳಗಿನ ವಿಚಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಭಾರತ ಏನು ಎಂಬುದು ಮತ್ತು ಭಾರತಕ್ಕೆ ಏನು ಬೇಕು ಎಂಬುದನ್ನು ನಿರ್ಧರಿಸಲು ಭಾರತೀಯರಿಗೆ ಗೊತ್ತಿದೆ. ಒಂದು ದೇಶವಾಗಿ ನಾವು ಒಗ್ಗಟ್ಟಿನಿಂದಿರೋಣ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.