ಅಮೃತಸರ/ನವದೆಹಲಿ: ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿದ್ದ ಭಾರತೀಯರನ್ನು ವಾಪಸು ಕಳುಹಿಸುವ ಪ್ರಕ್ರಿಯೆಯ ಮೊದಲ ಹಂತವಾಗಿ 104 ಭಾರತೀಯರನ್ನು ಹೊತ್ತ ಅಮೆರಿಕ ಸೇನಾ ವಿಮಾನವು ಬುಧವಾರ ಮಧ್ಯಾಹ್ನ 1.55ಕ್ಕೆ ಪಂಜಾಬ್‌ನ ಅಮೃತಸರದ ಶ್ರೀ ಗುರು ರಾಮ್‌ದಾಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. 205 ಭಾರತೀಯರು ವಾಪಸಾಗಲಿದ್ದಾರೆ ಎಂದು ಹೇಳಲಾಗಿತ್ತು.
ವಿಮಾನ ನಿಲ್ದಾಣದ ಸುತ್ತ ಬಿಗಿ ಭದ್ರತೆ ಏರ್ಪ ಡಿಸಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಅಮೆರಿಕದಿಂದ ವಾಪಸಾದ ಭಾರತೀಯರಿಗಾಗಿಯೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ವಾಪಸಾದ ಭಾರತೀಯರಿಗೆ ಅಪರಾಧ ಹಿನ್ನೆಲೆ ಇದೆಯೇ ಎಂಬುದನ್ನು ಪತ್ತೆ ಮಾಡಲು ವಿಮಾನ ನಿಲ್ದಾಣದ ಒಳಗೆ ವಿವಿಧ ಸಂಸ್ಥೆಗಳು ಪರಿಶೀಲನೆ ನಡೆಸಿದವು.
ಹಲವು ಸ್ತರಗಳ ಪರಿಶೀಲನೆ ಬಳಿಕ ಅಮೆರಿಕದಿಂದ ವಾಪಸಾದವರನ್ನು ಅವರ ಊರುಗಳಿಗೆ ಕಳುಹಿಸಲಾಗುತ್ತದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕಾರಿಯು ಅಧಿಕೃತ ಮಾಹಿತಿ ನೀಡಿಲ್ಲ. ವಿಮಾನ ನಿಲ್ದಾಣದಲ್ಲಿ ವಿವಿಧ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದವರನ್ನು ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿಕೊಂಡಿವೆ. ‘ಗುಜರಾತ್ ರಾಜ್ಯದಿಂದಲೇ ಹೆಚ್ಚಿನ ಜನರು ಅಮೆರಿಕಕ್ಕೆ ಅಕ್ರಮವಾಗಿ ಬರುತ್ತಿದ್ದಾರೆ’ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಇದೇ ತಿಂಗಳಲ್ಲಿ ಭೇಟಿಯಾಗಲಿದ್ದಾರೆ. ಇಬ್ಬರೂ ನಾಯಕರ ಭೇಟಿಗೆ ಕೆಲವು ದಿನಗಳ ಮೊದಲು ಅಮೆರಿಕವು ತನ್ನ ದೇಶದಲ್ಲಿ ಅಕ್ರಮವಾಗಿ ನೆಲಸಿದ್ದ ಭಾರತೀಯರನ್ನು ವಾಪಸು ಕಳುಹಿಸಿದೆ. ಟ್ರಂಪ್ ಹಾಗೂ ಮೋದಿ ಅವರ ಭೇಟಿಯ ವೇಳೆ ಈ ವಿಷಯದ ಕುರಿತು ಚರ್ಚೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
‘ಭಾರತೀಯರ ಕೈಗಳಿಗೆ ಕೋಳ ತೊಡಿಸಿರುವ ಚಿತ್ರವು ಬೇಸರ ತರಿಸಿದೆ. ಅವರಿಗೆ ಅವಮಾನ ಮಾಡಲಾಗಿದೆ’ ಎಂದು ಕಾಂಗ್ರೆಸ್ ಹೇಳಿದೆ. ‘2013ರಲ್ಲಿ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿ ದೇವಯಾನಿ ಖೋಬ್ರಗಡೆ ಅವರನ್ನು ಅಮೆರಿಕವು ಹೀಗೆಯೇ ಅವಮಾನಿಸಿತ್ತು. ಆ ವೇಳೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಅಮೆರಿಕದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು’ ಎಂದು ಕಾಂಗ್ರೆಸ್ ನೆನಪು ಮಾಡಿಕೊಂಡಿದೆ.
ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಅಮೆರಿಕದ ಅಧಿಕಾರಿಗಳು ದೇವಯಾನಿ ಅವರಿಗೆ ಕೋಳ ತೊಡಿಸಿ, ಅವರ ಬಟ್ಟೆ ಕಳಚಿ ತಪಾಸಣೆ ನಡೆಸಿದ್ದರು. ಈ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಸುಜಾತ ಸಿಂಗ್ ಪ್ರತಿಭಟನೆ ದಾಖಲಿಸಿದ್ದರು’ ಎಂದು ನೆನಪು ಮಾಡಿಕೊಂಡಿದ್ದಾರೆ.
‘ಅಮೆರಿಕದ ಈ ಕ್ರಮವನ್ನು ಖಂಡಿಸಿ, ಅಮೆರಿಕದ ಸಂಸತ್ತಿನ ನಿಯೋಗವನ್ನು ಭೇಟಿ ಮಾಡಲು ಮೀರಾ ಕುಮಾರ್, ಸುಶೀಲ್ ಕುಮಾರ್ ಶಿಂದೆ, ರಾಹುಲ್ ಗಾಂಧಿ ಅವರು ನಿರಾಕರಿಸಿದ್ದರು. ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರು ಈ ಕ್ರಮವನ್ನು ‘ಶೋಚನೀಯ’ ಎಂದಿದ್ದರು’ ಎಂದರು.
‘ಅಮೆರಿಕದ ರಾಯಭಾರಿಗಳಿಗೆ ನೀಡುತ್ತಿದ್ದ ಹಲವು ವಿಶೇಷ ಸವಲತ್ತುಗಳನ್ನೂ ತಡೆಹಿಡಿಯಲಾಗಿತ್ತು. ‘ಅಮೆರಿಕನ್ ಎಂಬಸಿ ಸ್ಕೂಲ್’ ಮೇಲೆ ಐಟಿ ದಾಳಿ ಮಾಡಲಾಗಿತ್ತು. ಈ ಎಲ್ಲದ ಬಳಿಕ ದೇವಯಾನಿಯವರನ್ನು ನಡೆಸಿಕೊಂಡ ಬಗ್ಗೆ ಅಮೆರಿಕವು ಖೇದ ವ್ಯಕ್ತಪಡಿಸಿತು’ ಎಂದರು.
ನಾವು ನಮ್ಮ ಜಮೀನನ್ನು ಮಾರಾಟ ಮಾಡಿ, ₹20–25 ಲಕ್ಷ ಸಾಲ ಮಾಡಿ ಮಗನನ್ನು ಅಮೆರಿಕಕ್ಕೆ ಕಳುಹಿಸಿದ್ದೆವು. ಈಗ ಅವನನ್ನು ವಾಪಸು ಕಳುಹಿಸಲಾಗಿದೆ. ನಮ್ಮ ಸಾಲ ತೀರಿಸುವುದಕ್ಕೆ ಭಗವಂತ್ ಮಾನ್ ಸರ್ಕಾರವು ನಮಗೆ ಆರ್ಥಿಕ ನೆರವು ನೀಡಬೇಕು. ನಮ್ಮ ಮಗನಿಗೆ ಸರ್ಕಾರಿ ನೌಕರಿ ನೀಡಬೇಕು.ಅಮೆರಿಕದಿಂದ ವಾಪಸಾದ ಮೊಹಾಲಿ ಜಿಲ್ಲೆಯ ಪ್ರದೀಪ್ ಅವರ ಪೋಷಕರು
ರಸ್ತೆಯಲ್ಲಿ ಉಗುಳುವುದು, ರಸ್ತೆಯಲ್ಲಿ ಕಸ ಬಿಸಾಡುವುದು, ಸಂಚಾರಿ ನಿಯಮ ಉಲ್ಲಂಘನೆ ಸೇರಿದಂತೆ ಅಮೆರಿಕದ ನಿಯಮಗಳನ್ನು ಉಲ್ಲಂಘಿಸಿದ ವಿದೇಶಿಯರನ್ನು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ನಿಯಮಗಳ ಜಾರಿ ಕಚೇರಿ (ಐಸಿಇ) ಅಧಿಕಾರಿಗಳು ಬಂಧಿಸುತ್ತಾರೆ. ಬಂಧನವಾದ ಬಳಿಕ ಸೂಕ್ತ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಬಳಿಕ, ಸೂಕ್ತ ದಾಖಲೆ ಇಲ್ಲದವರನ್ನು ವಲಸೆ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ. ಬಂಧಿಸುವ ಎಲ್ಲರನ್ನೂ ಬಂಧನ ಕೇಂದ್ರಕ್ಕೆ ಕಳುಹಿಸಲಾಗುವುದಿಲ್ಲ.
ವಶಕ್ಕೆ ಪಡೆಯುವುದು ಎಂದರೇನು?: ಸೂಕ್ತ ದಾಖಲೆ ಇಲ್ಲದೆ ಅಮೆರಿಕದಲ್ಲಿ ವಾಸಿಸುವವರನ್ನು ನಿರಾಶ್ರಿತರ ಮರುವಸತಿ ಕೇಂದ್ರಗಳಲ್ಲಿ ಇಡಲಾಗುತ್ತದೆ. ಪುಟ್ಟ ಮಕ್ಕಳನ್ನು ಈ ಕೇಂದ್ರಗಳಲ್ಲಿ ಇರಿಸಿಕೊಳ್ಳುವುದಿಲ್ಲ. ಜೊತೆಗೆ, ದಾಖಲೆಗಳಿಲ್ಲದೆ ಅಮೆರಿಕದಲ್ಲಿ ವಾಸಿಸುತ್ತಿದ್ದು, ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಹೋದವರನ್ನೂ ಇಲ್ಲಿ ಇರಿಸಿಕೊಳ್ಳುವುದಿಲ್ಲ.
ಪ್ರಮುಖವಾಗಿ ಮೂರು ವಿಧಗಳಲ್ಲಿ ವಿದೇಶಿಯರನ್ನು ಅವರ ದೇಶಗಳಿಗೆ ವಾಪಸು ಕಳುಹಿಸಲಾಗುತ್ತದೆ.
1. ಐಸಿಇ ಅಧಿಕಾರಿಯು ತನ್ನ ವಿವೇಚನೆ ಬಳಸಿ, ವ್ಯಕ್ತಿಯನ್ನು ವಾಪಸು ಹೋಗುವಂತೆ ಹೇಳುವುದು. ಇಲ್ಲಿ ವ್ಯಕ್ತಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.
2. ತಾನಾಗಿಯೇ ದೇಶ ಬಿಡುತ್ತೇನೆ ಎಂದು ಹೇಳಿದ ವ್ಯಕ್ತಿಗೆ ನ್ಯಾಯಾಲಯದಲ್ಲಿ ಯಾವುದೇ ಶಿಕ್ಷಿ ವಿಧಿಸದೆ ನ್ಯಾಯಾಧೀಶರು ತಮ್ಮ ವಿವೇಚನಾಧಿಕಾರ ಬಳಸಿ, ವ್ಯಕ್ತಿಯನ್ನು ವಾಪಸು ಕಳುಹಿಸುವುದು
3. ಗಡಿಯಲ್ಲಿಯೇ ವಿದೇಶಿಯರನ್ನು ತಡೆದು, ಯಾವುದೇ ಕ್ರಮ ಕೈಗೊಳ್ಳದೇ ಅಧಿಕಾರಿಗಳು ವಾಪಸು ಕಳುಹಿಸುವುದು
ಆಧಾರ: ಅಮೆರಿಕ ವಲಸೆ ಮತ್ತು ಕಸ್ಟಮ್ಸ್ ನಿಯಮಗಳ ಜಾರಿ ಕಚೇರಿ ವೆಬ್‌ಸೈಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.