
ನವದೆಹಲಿ: ಭಾರತದಿಂದ ಅಮೆರಿಕ ಪ್ರವೇಶಿಸುವ ಕೆಲವು ಬಗೆಯ ಸೌರ ಉತ್ಪನ್ನಗಳ ಮೇಲೆ ಅಲ್ಲಿನ ಆಡಳಿತವು ಶೇಕಡ 125.87ರಷ್ಟು ಸುಂಕ ವಿಧಿಸಿದೆ.
ಈ ಸೌರ ಉತ್ಪನ್ನಗಳಿಗೆ ಭಾರತದ ಸರ್ಕಾರವು ‘ನ್ಯಾಯಸಮ್ಮತವಲ್ಲದ ಬಗೆಯಲ್ಲಿ ಸಬ್ಸಿಡಿಗಳನ್ನು ನೀಡುತ್ತಿರುವ ಕಾರಣಕ್ಕಾಗಿ ಹೆಚ್ಚುವರಿ ಸುಂಕ ವಿಧಿಸಲಾಗಿದೆ’ ಎಂದು ಅಮೆರಿಕ ಹೇಳಿದೆ. ಇಂಡೊನೇಷ್ಯಾ ಮತ್ತು ಲಾವೋಸ್‌ನಿಂದ ಅಮೆರಿಕ ಪ್ರವೇಶಿಸುವ ನಿರ್ದಿಷ್ಟ ಸೌರ ಉತ್ಪನ್ನಗಳ ಮೇಲೆಯೂ ಅಮೆರಿಕ ಸರ್ಕಾರ ಬೇರೆ ಬೇರೆ ಪ್ರಮಾಣದಲ್ಲಿ ಸುಂಕ ವಿಧಿಸಿದೆ.
ಭಾರತದ ಸೌರ ಉತ್ಪನ್ನಗಳ ಮೇಲೆ ವಿಧಿಸಿರುವ ಸುಂಕವು ಈಗಾಗಲೇ ಜಾರಿಗೆ ಬಂದಿರುವ ಶೇ 10ರಷ್ಟು ಸುಂಕದ ಮೇಲೆ ಹೆಚ್ಚುವರಿಯಾಗಿ ಅನ್ವಯ ಆಗಲಿದೆ. ಅಮೆರಿಕ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ನೀಡಿರುವ ವಿವರದ ಪ್ರಕಾರ, 2022ರಲ್ಲಿ ಭಾರತದಿಂದ ಅಮೆರಿಕಕ್ಕೆ ಆಮದು ಆದ ಸೌರ ಉತ್ಪನ್ನಗಳ ಮೊತ್ತವು 83.86 ಮಿಲಿಯನ್ ಡಾಲರ್ (ಇಂದಿನ ಅಂದಾಜು ₹762 ಕೋಟಿ) ಆಗಿತ್ತು. ಇದು, 2024ರಲ್ಲಿ 792 ಮಿಲಿಯನ್ ಡಾಲರ್‌ಗೆ (ಇಂದಿನ ಅಂದಾಜು ₹7,204 ಕೋಟಿ) ತಲುಪಿದೆ.
‘ನ್ಯಾಯಸಮ್ಮತವಲ್ಲದ ಬಗೆಯಲ್ಲಿ ಸಬ್ಸಿಡಿ ಪಡೆದು, ಅಮೆರಿಕದ ಮಾರುಕಟ್ಟೆ ಪ್ರವೇಶಿಸುವ’ ಭಾರತದ ಸೌರ ಉತ್ಪನ್ನಗಳ ಮೇಲಿನ ಸುಂಕದ ಪ್ರಮಾಣದ ಬಗ್ಗೆ ಅಮೆರಿಕವು ಜುಲೈನಲ್ಲಿ ಅಂತಿಮ ತೀರ್ಮಾನ ಪ್ರಕಟಿಸುವ ನಿರೀಕ್ಷೆ ಇದೆ.
ಭಾರತದ ಕಂಪನಿಗಳ ಮೇಲೆ ವಿಧಿಸುವ ಸುಂಕದ ಕಾರಣದಿಂದಾಗಿ, ಅಮೆರಿಕದ ಕಂಪನಿಗಳಿಗೆ ಒಂದಿಷ್ಟು ಅನುಕೂಲ ಆಗುತ್ತದೆ.
ನವದೆಹಲಿ/ಬೆಂಗಳೂರು: ಭಾರತದ ಕೆಲವು ಸೌರ ಉತ್ಪನ್ನಗಳ ಮೇಲಿನ ಸುಂಕವನ್ನು ಅಮೆರಿಕವು ಹೆಚ್ಚಿಸಿರುವುದರ ಪರಿಣಾಮವು ತಮ್ಮ ಮೇಲೆ ಸೀಮಿತವಾಗಿ ಇರಲಿದೆ ಎಂದು ಸೌರಫಲಕ ತಯಾರಿಕಾ ವಲಯದ ಪ್ರಮುಖ ಕಂಪನಿಗಳಾದ ವಿಕ್ರಮ್ ಸೋಲಾರ್, ವಾರೀಸ್ ಎನರ್ಜೀಸ್, ಪ್ರೀಮಿಯರ್ ಎನರ್ಜೀಸ್ ಹೇಳಿವೆ.
ಆದರೆ ಪರಿಣಾಮವು ಗಂಭೀರವಾಗಿ ಇರಬಹುದು ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕವು ವಿಧಿಸಿರುವ ಭಾರಿ ಪ್ರಮಾಣದ ಸುಂಕವು ಭಾರತದ ಕಂಪನಿಗಳಿಗೆ ತಮ್ಮ ಉತ್ಪನ್ನಗಳನ್ನು ಬೇರೆ ಮಾರುಕಟ್ಟೆಗಳಿಗೂ ರಫ್ತು ಮಾಡಲು ಒಂದು ಅವಕಾಶವಾಗಿ ಒದಗಿಬರಬಹುದು ಎಂದು ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಸಂಸ್ಥೆ ಒಸ್ತಾರಾ ಅಡ್ವೈಸರ್ಸ್‌ನ ಸಿಇಒ ವಸುಧಾ ಮಾಧವನ್ ಹೇಳಿದ್ದಾರೆ.
‘ಅಮೆರಿಕದಲ್ಲಿನ ನಮ್ಮ ವಹಿವಾಟುಗಳು ಭಾರತದಿಂದ ಸೌರಫಲಕ ತರಿಸಿಕೊಳ್ಳುವುದನ್ನು ಅವಲಂಬಿಸಿಲ್ಲ. ಆ ಮಾರುಕಟ್ಟೆಗೆ ನಾವು ಬೇರೆ ಬೇರೆ ಕಡೆಗಳಿಂದ ತರಿಸಿಕೊಳ್ಳುವ ವ್ಯವಸ್ಥೆಯನ್ನು ಈಗಾಗಲೇ ಹೊಂದಿದ್ದೇವೆ. ಹೀಗಾಗಿ ನಮ್ಮ ಮೇಲೆ ಹಣಕಾಸಿನ ದೃಷ್ಟಿಯಿಂದ ಆಗುವ ಪರಿಣಾಮ ಸೀಮಿತವಾಗಿರಲಿದೆ’ ಎಂದು ವಿಕ್ರಮ್ ಸೋಲಾರ್ ಕಂಪನಿಯ ಸಿಎಂಡಿ ಗ್ಯಾನೇಶ್ ಚೌಧರಿ ಹೇಳಿದ್ದಾರೆ.
‘ಈ ಹಂತದಲ್ಲಿ ಅಮೆರಿಕದಲ್ಲಿ ಆಗಬೇಕಿರುವ ಕೆಲಸಗಳನ್ನು ಮಾಡಲು ಯಾವುದೇ ಸಮಸ್ಯೆ ಇಲ್ಲ’ ಎಂದು ವಾರೀ ಎನರ್ಜೀಸ್ ಕಂಪನಿಯ ಹಣಕಾಸು ವಿಭಾಗದ ಸಮೂಹ ಮುಖ್ಯಸ್ಥ ಅಭಿಷೇಕ್ ಪಾರೀಖ್ ಹೇಳಿದ್ದಾರೆ.
ಅಮೆರಿಕದ ಹೊಸ ಸುಂಕದಿಂದಾಗಿ ತಮ್ಮ ವಹಿವಾಟಿಗೆ ಕೂಡ ಯಾವುದೇ ಧಕ್ಕೆ ಇಲ್ಲ ಎಂದು ಪ್ರೀಮಿಯರ್ ಎನರ್ಜೀಸ್‌ನ ಹಿರಿಯ ಅಧಿಕಾರಿ ವಿನಯ್ ರುಸ್ತಾಗಿ ಹೇಳಿದ್ದಾರೆ.
ಭಾರತದ ಸೌರ ಉತ್ಪನ್ನಗಳ ಮೇಲೆ ವಿಧಿಸಲಾಗಿರುವ ಹೆಚ್ಚುವರಿ ಸುಂಕವು ಅವುಗಳ ರಫ್ತು ಪ್ರಮಾಣ ಕಡಿಮೆ ಮಾಡಿ, ಅವು ಭಾರತದ ಮಾರುಕಟ್ಟೆಯಲ್ಲೇ ಉಳಿಯುವಂತೆ ಮಾಡಬಹುದು. ಇದರಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ದರ ಸ್ಪರ್ಧೆ ಹೆಚ್ಚಬಹುದು ಎಂದು ದತ್ತಾ ಪವರ್ ಇನ್ಫ್ರಾ ಪ್ರೈ.ಲಿ. ಕಂಪನಿಯ ಹಿರಿಯ ಉಪಾಧ್ಯಕ್ಷ ತರುಣ್ ಪಧಿ ಹೇಳಿದ್ದಾರೆ.
‘ಶೇ 125ರಷ್ಟು ಸುಂಕ ವಿಧಿಸಿರುವುದು ಭಾರತದ ಸೌರ ಉತ್ಪನ್ನಗಳ ರಫ್ತುದಾರರಿಗೆ ದೊಡ್ಡ ಏಟು. ಈ ಪರಿಯ ಸುಂಕದಿಂದಾಗಿ ಅಮೆರಿಕ ಮಾರುಕಟ್ಟೆಯು ವಾಣಿಜ್ಯ ಚಟುವಟಿಕೆಯ ದೃಷ್ಟಿಯಿಂದ ಅನುಕೂಲಕರ ಅಲ್ಲದ ಸ್ಥಿತಿಗೆ ತಲುಪುತ್ತದೆ’ ಎಂದು ಸರಕು ಸಾಗಣೆ ವಹಿವಾಟಿನಲ್ಲಿ ತೊಡಗಿಸುವ ಜಾಸ್ಪರ್ ಶಿಪ್ಪಿಂಗ್‌ನ ಸಿಇಒ ಪುಷ್ಪಂಕ್ ಕೌಶಿಕ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.