ADVERTISEMENT

ಅಮೆರಿಕದಲ್ಲಿನ ಮೊದಲ ಬ್ಯಾಚ್‌ನ 205 ಭಾರತೀಯ ವಲಸಿಗರು ಅಮೃತಸರ ವಿಮಾನ ನಿಲ್ದಾಣಕ್ಕೆ

ಇಂದು ಮಧ್ಯಾಹ್ನ ಪಂಜಾಬ್‌ನ ಅಮೃತಸರದ ಶ್ರೀ ರಾಮದಾಸ್‌ಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುವ ಸಂಭವ ಇದೆ ಎಂದು ತಿಳಿದು ಬಂದಿದೆ.

ಪಿಟಿಐ
Published 5 ಫೆಬ್ರುವರಿ 2025, 4:36 IST
Last Updated 5 ಫೆಬ್ರುವರಿ 2025, 4:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅಮೃತಸರ: ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿದ್ದ 205 ಭಾರತೀಯರನ್ನು ಅಮೆರಿಕದ ವಾಯುಪಡೆ ವಿಮಾನ ಸಿ–17 ದಲ್ಲಿ ಭಾರತಕ್ಕೆ ಕರೆತರಲಾಗುತ್ತಿದೆ. ಇಂದು ಮಧ್ಯಾಹ್ನ ಪಂಜಾಬ್‌ನ ಅಮೃತಸರದ ಶ್ರೀ ರಾಮದಾಸ್‌ಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುವ ಸಂಭವ ಇದೆ ಎಂದು ತಿಳಿದು ಬಂದಿದೆ.

ಭಾರತದ ವಲಸಿಗರಿರುವ ವಿಮಾನವು ಮಂಗಳವಾರ ಬೆಳಗಿನ ಜಾವ 3ಕ್ಕೆ (ಭಾರತೀಯ ಕಾಲಮಾನ) ಟೆಕ್ಸಾಸ್‌ನಿಂದ ಪ್ರಯಾಣ ಬೆಳೆಸಿದೆ ಎಂದು ಮೂಲಗಳು ತಿಳಿಸಿವೆ. ಇಂದು ಬೆಳಿಗ್ಗೆಯೇ ವಿಮಾನ ಅಮೃತಸರಕ್ಕೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮೊದಲ ಬ್ಯಾಚ್‌ನಲ್ಲಿ ಬರುತ್ತಿರುವ ಈ 205 ಭಾರತೀಯರು ಪಂಜಾಬ್ ಹಾಗೂ ಸುತ್ತಮುತ್ತಲಿನ ರಾಜ್ಯಗಳಿಗೆ ಸೇರಿದವರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ ಡಿಜಿಪಿ ಗೌರವ್ ಯಾದವ್, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ವಲಸೆ ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ಭರಮಾಡಿಕೊಳ್ಳಲಿದ್ದಾರೆ. ಮುಂದಿನ ಕ್ರಮಕ್ಕಾಗಿ ನಾವು ಅವರ ಕಾಳಜಿ ವಹಿಸಲಿದ್ದೇವೆ ಎಂದು ವಿವರಿಸಿದ್ದಾರೆ.

ಪಂಜಾಬ್‌ನ ಎನ್‌ಆರ್‌ಐ ವ್ಯವಹಾರಗಳ ಇಲಾಖೆಯ ಸಚಿವ ಕುಲದೀಪ್ ಸಿಂಗ್ ದಲಿವಾಲಾ ಅವರು, ಅಮೆರಿಕದ ಟ್ರಂಪ್ ಸರ್ಕಾರದಿಂದ ಲಕ್ಷಾಂತರ ಭಾರತೀಯ ವಲಸಿಗರಿಗೆ ನಿರಾಸೆಯಾಗಿದೆ. ಕೆಲಸ ಅರಸಿಕೊಂಡು ಹೋದವರಿಗೆ ಈ ರೀತಿಯ ಅನ್ಯಾಯ ಸರಿಯಲ್ಲ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ ಪಂಜಾಬ್ ಜನರ ಹಿತಾಸಕ್ತಿಗೆ ಕ್ರಮ ವಹಿಸಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತನ್ನ ನೆಲದಲ್ಲಿ ಅಕ್ರಮವಾಗಿ ನೆಲಸಿರುವ ಭಾರತೀಯ ವಲಸಿಗರ ಗಡೀಪಾರು ಪ್ರಕ್ರಿಯೆಯನ್ನು ಅಮೆರಿಕ ಆರಂಭಿಸಿದ್ದು, ಸದ್ಯ ಮೊದಲ ಬ್ಯಾಚ್‌ನಲ್ಲಿ 205 ಮಂದಿಯನ್ನು ತನ್ನ ವಾಯುಪಡೆ ವಿಮಾನದಲ್ಲಿ ಭಾರತಕ್ಕೆ ಕಳುಹಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾಗಲು ವಾಷಿಂಗ್ಟನ್‌ ಡಿ.ಸಿಗೆ ಪ್ರಯಾಣ ಬೆಳೆಸುವುದಕ್ಕೆ ಕೆಲವೇ ದಿನಗಳ ಮುನ್ನ ಈ ಬೆಳವಣಿಗೆ ನಡೆದಿದೆ. 

ಟ್ರಂಪ್ ಅವರು ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎರಡು ವಾರಗಳ ನಂತರ ಅಕ್ರಮ ವಲಸಿಗರ ಮೊದಲ ತಂಡವನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದೆ. 

ಮೊದಲ ತಂಡದಲ್ಲಿ ಗಡೀಪಾರು ಆಗುತ್ತಿರುವ 205 ಮಂದಿಯ ಪೌರತ್ವವನ್ನು ಭಾರತವು ದೃಢಪಡಿಸಿದೆ. ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳು ಪ್ರತಿಯೊಬ್ಬ ವಲಸಿಗರ ಗುರುತನ್ನು ಪರಿಶೀಲಿಸಿದ್ದಾರೆ. ಗಡೀಪಾರು ಪ್ರಕ್ರಿಯೆಯಲ್ಲಿ ಭಾರತವು ಅಮೆರಿಕಕ್ಕೆ ಸಹಕಾರ ನೀಡುತ್ತಿರುವುದನ್ನು ಇದು ಸೂಚಿಸುತ್ತದೆ.

ಟ್ರಂಪ್‌ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅಮೆರಿಕವು ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಆರಂಭಿಸಿತ್ತು. ತನ್ನ ವಾಯುಪಡೆ ವಿಮಾನದಲ್ಲಿ ನೂರಾರು ಅಕ್ರಮ ವಲಸಿಗರನ್ನು ಈಗಾಗಲೇ ಗ್ವಾಟೆಮಾಲ, ಪೆರು ಮತ್ತು ಹಾಂಡುರಸ್‌ಗೆ ಗಡೀಪಾರು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.