ADVERTISEMENT

ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಕ್ರಮ: 104 ಮಂದಿ ಭಾರತೀಯರು ಸ್ವದೇಶಕ್ಕೆ ವಾಪಸ್

ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮೆರಿಕದ ಸೇನಾ ವಿಮಾನ

ಪಿಟಿಐ
Published 5 ಫೆಬ್ರುವರಿ 2025, 10:32 IST
Last Updated 5 ಫೆಬ್ರುವರಿ 2025, 10:32 IST
<div class="paragraphs"><p>ಭಾರತೀಯರು ಅಮೃತಸರದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭ</p></div>

ಭಾರತೀಯರು ಅಮೃತಸರದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭ

   

–ಪಿಟಿಐ ಚಿತ್ರ

ಅಮೃತಸರ/ನವದೆಹಲಿ: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ ಭಾರತೀಯರನ್ನು ವಾಪಸು ಕಳುಹಿಸುವ ಪ್ರಕ್ರಿಯೆಯ ಮೊದಲ ಹಂತವಾಗಿ 104 ಭಾರತೀಯರನ್ನು ಹೊತ್ತ ಅಮೆರಿಕ ಸೇನಾ ವಿಮಾನವು ಬುಧವಾರ ಮಧ್ಯಾಹ್ನ 1.55ಕ್ಕೆ ಪಂಜಾಬ್‌ನ ಅಮೃತಸರದ ಶ್ರೀ ಗುರು ರಾಮ್‌ದಾಸ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. 205 ಭಾರತೀಯರು ವಾಪಸಾಗಲಿದ್ದಾರೆ ಎಂದು ಹೇಳಲಾಗಿತ್ತು.

ADVERTISEMENT

ವಿಮಾನ ನಿಲ್ದಾಣದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಅಮೆರಿಕದಿಂದ ವಾಪಸಾದ ಭಾರತೀಯರಿಗಾಗಿಯೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ವಾಪಸಾದ ಭಾರತೀಯರಿಗೆ ಅಪರಾಧ ಹಿನ್ನೆಲೆ ಇದೆಯೇ ಎಂಬುದನ್ನು ಪತ್ತೆ ಮಾಡಲು ವಿಮಾನ ನಿಲ್ದಾಣದ ಒಳಗೆ ವಿವಿಧ ಸಂಸ್ಥೆಗಳು ತನಿಖೆ ನಡೆಸಿದವು.

ಹಲವು ಸ್ಥರದ ಪರಿಶೀಲನೆ ಬಳಿಕ ಅಮೆರಿಕದಿಂದ ವಾಪಸಾದವರನ್ನು ಅವರ ಊರುಗಳಿಗೆ ಕಳುಹಿಸಲಾಗುತ್ತದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕಾರಿಯು ಅಧಿಕೃತ ಮಾಹಿತಿ ನೀಡಿಲ್ಲ. ವಿಮಾನ ನಿಲ್ದಾಣದಲ್ಲಿ ವಿವಿಧ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದವರನ್ನು ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿಕೊಂಡಿವೆ. ‘ಗುಜರಾತ್‌ ರಾಜ್ಯದಿಂದಲೇ ಹೆಚ್ಚಿನ ಜನರು ಅಮೆರಿಕಕ್ಕೆ ಅಕ್ರಮವಾಗಿ ಬರುತ್ತಿದ್ದಾರೆ’ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಟ್ರಂಪ್–ಮೋದಿ ಭೇಟಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಇದೇ ತಿಂಗಳಲ್ಲಿ ಭೇಟಿಯಾಗಲಿದ್ದಾರೆ. ಇಬ್ಬರೂ ನಾಯಕರ ಭೇಟಿಗೆ ಕೆಲವು ದಿನಗಳ ಮೊದಲು ಅಮೆರಿಕವು ತನ್ನ ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಭಾರತೀಯರನ್ನು ವಾಪಸು ಕಳುಹಿಸಿದೆ. ಟ್ರಂಪ್‌ ಹಾಗೂ ಮೋದಿ ಅವರ ಭೇಟಿಯ ವೇಳೆ ಈ ವಿಷಯದ ಕುರಿತು ಚರ್ಚೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ನಮಗೆಲ್ಲ ತಿಳಿದಿದೆ. ಮೋದಿ ಅವರು ಟ್ರಂಪ್‌ ಅವರನ್ನು ‘ಟ್ರಂಪ್‌ ನನ್ನ ಸ್ನೇಹಿತ’ ಎಂದೇ ಕರೆಯುತ್ತಾರೆ. 2019ರ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಟ್ರಂಪ್‌ ಪರವಾಗಿ ಪ್ರಚಾರವನ್ನೂ ನಡೆಸಿದ್ದರು. ಅಮೆರಿಕದಲ್ಲಿ ವಾಸವಿರುವ ಭಾರತೀಯರ ಮೇಲೆ ಜೈಲು ಮತ್ತು ಟ್ರಂಪ್‌ ಅವರ ವಲಸೆ ನೀತಿಯ ತೂಗುಗತ್ತಿ ನೇತಾಡುತ್ತಿದೆ. ಮೋದಿ ಅವರು ಟ್ರಂಪ್‌ ಅವರೊಂದಿಗೆ ಮಾತನಾಡಿ, ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು.
–ಕುಲ್ದೀಪ್‌ ಸಿಂಗ್‌ ದಾಲೀವಾಲ್‌, ಪಂಜಾಬ್‌ನ ಎನ್‌ಆರ್‌ಐ ವ್ಯವಹಾರಗಳ ಸಚಿವ
ನಾವು ನಮ್ಮ ಜಮೀನನ್ನು ಮಾರಾಟ ಮಾಡಿ, ₹20–25 ಲಕ್ಷ ಸಾಲ ಮಾಡಿ ಮಗನನ್ನು ಅಮೆರಿಕಕ್ಕೆ ಕಳುಹಿಸಿದ್ದೆವು. ಈಗ ಅವನನ್ನು ವಾಪಸು ಕಳುಹಿಸಲಾಗಿದೆ. ನಮ್ಮ ಸಾಲ ತೀರಿಸುವುದಕ್ಕೆ ಭಗವಂತ್‌ ಮಾನ್‌ ಸರ್ಕಾರವು ನಮಗೆ ಆರ್ಥಿಕ ನೆರವು ನೀಡಬೇಕು. ನಮ್ಮ ಮಗನಿಗೆ ಸರ್ಕಾರಿ ನೌಕರಿ ನೀಡಬೇಕು
–ಅಮೆರಿಕದಿಂದ ವಾಪಸಾದ ಮೊಹಾಲಿ ಜಿಲ್ಲೆಯ ಪ್ರದೀಪ್‌ ಅವರ ಪೋಷಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.