ADVERTISEMENT

ಭಾರತೀಯ ಯುವಕನಿಗೆ ಕೈಕೋಳ: ಅಮೆರಿಕದ ವಿವರಣೆ ಕೇಳಿದ ಭಾರತ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 10:30 IST
Last Updated 11 ಜೂನ್ 2025, 10:30 IST
   

ನವದೆಹಲಿ: ಅಮೆರಿಕದ ನ್ಯೂವಾರ್ಕ್‌ ವಿಮಾನ ನಿಲ್ದಾಣದಲ್ಲಿ ಭಾರತೀಯ ಯುವಕನಿಗೆ ಕೈಕೋಳ ಹಾಕಿ ನೆಲದ ಮೇಲೆ ಉರುಳಿಸಿ ಅಪರಾಧಿಯಂತೆ ನಡೆಸಿಕೊಂಡ ಘಟನೆ ಸಂಬಂಧ ವಿವರಣೆ ನೀಡುವಂತೆ ಅಮೆರಿಕಕ್ಕೆ ಭಾರತ ಸರ್ಕಾರ ಕೇಳಿದೆ ಎಂದು ವರದಿಯಾಗಿದೆ.

ಭಾರತೀಯ ಯುವಕನಿಗೆ ಕೈಕೋಳ ಹಾಕಿ ನೆಲದ ಮೇಲೆ ಉರುಳಿಸಿದ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.

ಹರಿಯಾಣ ಮೂಲದ ಯುವಕ ವೀಸಾ ಇಲ್ಲದೆ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ್ದಾನೆ. ನ್ಯಾಯಾಲಯದ ಆದೇಶದ ಪ್ರಕಾರವೇ ಆತನನ್ನು ಭಾರತಕ್ಕೆ ಗಡೀಪಾರು ಮಾಡಲಾಗುತ್ತಿದೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಪಷ್ಟನೆ ನೀಡಿದೆ.

ADVERTISEMENT

ಈ ಪ್ರಕರಣ ಸಂಬಂಧ ವಿದೇಶಾಂಗ ಸಚಿವಾಲಯವು ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಪ್ರಕರಣದ ವಿವರಗಳನ್ನು ಖಚಿತಪಡಿಸಿಕೊಳ್ಳಲು ಅಮೆರಿಕದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದೂ ಮೂಲಗಳು ವಿವರಿಸಿವೆ.

ಭಾರತೀಯ ಯುವಕನಿಗೆ ಕೈಕೋಳ ಹಾಕಿದ ಘಟನೆಯನ್ನು ಭಾರತ ಮೂಲದ ಅಮೆರಿಕನ್ ಕುನಾಲ್ ಜೈನ್ ವಿಡಿಯೊ ಮಾಡಿದ್ದರು. ಅಪರಾಧಿಯಂತೆ ನಡೆಸಿಕೊಳ್ಳುವ ಘಟನೆ ಇದಾಗಿದ್ದು, ‘ಅಸಹಾಯಕ ಮತ್ತು ಹೃದಯ ವಿದ್ರಾವಕ’ ಎಂದು ಹೇಳಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.